ಸಿದ್ದಾಪುರ: ತಹಶೀಲ್ದಾರ ಕಚೇರಿಯಿಂದ ರೈತರಿಗೆ ಪೂರೈಸುತ್ತಿರುವ ಪಹಣಿ ಪತ್ರಿಕೆಗೆ ರೂ.25ನ್ನು ವಸೂಲಿ ಮಾಡುತ್ತಿದ್ದು, ಅದನ್ನು ಕಡಿಮೆ ಮಾಡುವಂತೆ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಉತ್ತರ ಕನ್ನಡ ರೈತ ಸಂಘದ ವತಿಯಿಂದ ಮನವಿ ರವಾನಿಸಲಾಗಿದೆ.
ಜಿಲ್ಲಾಧ್ಯಕ್ಷ ಕೆರಿಯಪ್ಪ ನಾಯ್ಕ ಈ ಕುರಿತು ಮನವಿ ಸಲ್ಲಿಸಿ ಮಾತನಾಡಿ, ಈ ಮೊದಲು ತಹಶೀಲ್ದಾರ ಕಛೇರಿಯಲ್ಲಿ ನೀಡುವ ರೈತರ ಪಹಣಿ ಪತಿಕೆಗೆ ಒಂದು ಸರ್ವೆ ನಂಬರಕ್ಕೆ ರೂ.15ಗಳನ್ನು ಪಡೆಯಲಾಗುತ್ತಿದೆ. ಆದರೆ ಸರಕಾರ ರೈತರ ಗಮನಕ್ಕೆ ತರದೆ ಪಹಣಿ ಪತ್ರಿಕೆಯ ಶುಲ್ಕವನ್ನು ಹೆಚ್ಚಿಸಿದೆ. ಈಗ ನೆಮ್ಮದಿ ಕೇಂದ್ರದಲ್ಲಿ ಒಂದು ಪಹಣಿಗೆ ರೂ.25 ನೀಡಿ ಪಡೆಯಬೇಕಾಗಿದೆ. ಈ ಮೊದಲು ಗಣಕೀಕೃತ ಪಹಣಿ ಪತ್ರ ಬಂದಾಗ ಒಂದು ಪಹಣಿ ಪತ್ರಿಕೆಗೆ ರೂ.5 ಪಡೆಯುತ್ತಿದ್ದರು. ಈ ಹಿಂದೆ ಪಡೆಯುತ್ತಿದ್ದಂತೆ ಐದು ರೂಪಾಯಿ ಪಡೆದು ಪಹಣಿ ಪತ್ರಿಕೆ ವಿತರಿಸುವಂತೆ ಆಗಬೇಕೆಂದು ಒತ್ತಾಯಿಸಿದ್ದಾರೆ.
ರೈತರ ಒಂದು ಕೆಲಸಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಹತ್ತು ಸಲ ಓಡಾಡಿಸುವುದು ಬಂದಾಗಬೇಕು. ನೆಮ್ಮದಿ ಕೇಂದ್ರವನ್ನು ಖಾಸಗೀಕರಣ ಮಾಡಿರುವುದು ಇದಕ್ಕೆಲ್ಲ ಕಾರಣ ಎಂಬುದು ನಮಗೆ ಕಂಡುಬರುತ್ತದೆ. ಈ ರೀತಿ ಎಲ್ಲಾ ಇಲಾಖೆಗಳನ್ನು ಖಾಸಗೀಕರಣ ಮಾಡುತ್ತಿರುವುದು ಎಂಎಲ್ಎಗಳ ಖಾಸಗಿ ಉದ್ಧಾರಕ್ಕೋ ಅಥವಾ ನಮ್ಮ ಪ್ರಜಾಪ್ರಭುತ್ವದ ಉದ್ಧಾರಕ್ಕೂ ಎಂಬುದು ತಿಳಿಯದಾಗಿದೆ. ರೈತರಿಗೆ ದಿನ ನಿತ್ಯದ ಸಂಘ- ಸಂಸ್ಥೆಗಳ ವ್ಯವಹಾರಕ್ಕೆ ಪಹಣಿ ಪತ್ರಿಕೆ ಬೇಕಾಗಿದ್ದು, ಅಲ್ಲದೇ ಎಲ್ಲಾ ಸಂಸ್ಥೆಯವರು ಮೂಲ ಪಹಣಿಯನ್ನೇ ತೆಗೆಸಿ ನೀಡಲು ಆಗ್ರಹ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೇವಲ ಒಂದು ಗುಂಟೆ, ಎರಡು ಗುಂಟೆ ಇರುವ ಅತಿ ಸಣ್ಣ ರೈತರು ಪದೇ ಪದೇ ಪಹಣಿಯನ್ನು ತೆಗೆಸಬೇಕಾಗಿದ್ದು, ಇದರಿಂದ ಪ್ರತಿ ಸಲ ಪಹಣಿ ತೆಗೆಸುವಾಗಲೂ ಒಂದು ಸರ್ವೆ ನಂಬರ್ಗೆ ರೂ.25 ನೀಡಬೇಕು. ಇದರಿಂದ ಬಡ ಮತ್ತು ಸಣ್ಣ ಅತಿ ಸಣ್ಣ ರೈತರನ್ನು ಸದ್ದಿಲ್ಲದೇ ಸುಲಿಗೆ ಮಾಡುತ್ತಿದ್ದಾರೆ. ದಿನನಿನತ್ಯ ಬಳಕೆಯ ಎಲ್ಲಾ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ರೈತರು ಪಹಣಿಗೂ ರೂ.25 ಏರಿಸಿದ್ದು, ಇದರಿಂದ ರೈತರಿಗೆ ತೀರಾ ಅನ್ಯಾಯವಾಗಿದೆ. ಆದ್ದರಿಂದ ಕೂಡಲೇ ಸರಕಾರದ ನೆಮ್ಮದಿ ಕೇಂದ್ರದಲ್ಲಿ ನೀಡುತ್ತಿರುವ ಪಹಣಿಗೆ ವಿಧಿಸುತ್ತಿರುವ ರೂ.25ನ್ನು ಕೂಡಲೇ ಕಡಿಮೆ ಮಾಡಿ, ಅದನ್ನು ರೂ.5ಕ್ಕೆ ಇಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿಸಿಕೊAಡಿದ್ದಾರೆ. ಇಲ್ಲದಿದ್ದಲ್ಲಿ ರೈತರ ಪರವಾಗಿರುವ ರೈತ ಸಂಘದವರು ಈ ಬಗ್ಗೆ ಬೃಹತ್ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.