ಕಾರವಾರ: ಮರಳಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಕಾರವಾರ ತಾಲೂಕಾ ಸಿವಿಲ್ ನೊಂದಾಯಿತ ಗುತ್ತಿಗೆದಾರರ ಸಂಘದಿoದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಮರಳು ಹೇರಳವಾಗಿ ಸಿಗುತ್ತದೆ. ಕಾಳಿ ನದಿ ಮತ್ತು ಅರಬ್ಬಿ ಸಮುದ್ರದ ಸಂಗಮ ಪ್ರದೇಶ ಹಾಗೂ ಈ ಭಾಗದ ಇತರೆ ಪ್ರದೇಶದಲ್ಲಿ ಎಷ್ಟೇ ಉಸುಕು ತೆಗೆದರು ಅಷ್ಟೇ ಉಸುಕು ಶೇಖರಣೆಯಾಗುತ್ತದೆ. ಇದರಿಂದ ಉಸುಕಿನ ದಿಬ್ಬಗಳು ನಿರ್ಮಾಣವಾಗಿ ಮಳೆಗಾಲದ ಸಂದರ್ಭದಲ್ಲಿ ನೆರೆ ಉಂಟಾಗಿ ನದಿ ಪ್ರದೇಶದ ಅಕ್ಕಪಕ್ಕ ವಾಸಿಸುವವರ ಜೀವನ ಅಸ್ತವ್ಯಸ್ಥವಾಗುತ್ತದೆ. ಆದ್ದರಿಂದ ಮರಳು ತೆರವಿಗೆ ತಕ್ಷಣ ಪರವಾನಗಿ ನೀಡುವಂತಾಗಬೇಕು ಎಂದು ಒತ್ತಾಯಿಸಿದರು.
ಸಿಎಲ್ ಗುತ್ತಿಗೆದಾರರ ಸಂಘ, ಬಿಲ್ಡರ್ ಅಸೋಸಿಯೇಶನ್, ಸರಕು ಸಾಗಾಣಿಕಾ ಆಟೋ ಸಂಘ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಆರ್‌ಟಿಒ ಅಧಿಕಾರಿಗಳನ್ನು ಒಳಗೊಂಡು ಡಿಸಿ ಅಧ್ಯಕ್ಷತೆಯಲ್ಲಿ ಸಭೆ ಕರೆದು ಸಮಸ್ಯೆಯನ್ನು ಆಲಿಸಿ ಉಸುಕು ತೆಗೆಯಲು ಮತ್ತು ಸಾಗಾಟ ಮಾಡಲು ನಿಯಮವನ್ನು ಸರಳೀಕರಣ ಮಾಡಬೇಕು. ಸಾರ್ವಜನಿಕರಿಗೂ ಅನುಕೂಲವಾಗುವಂತೆ ಸರಕಾರದ ಬೊಕ್ಕಸಕ್ಕೂ ಆದಾಯ ಬರುವಂತೆ ಸರಕಾರಕ್ಕೆ ಮನವರಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಜನರಿಗೆ ಅವಶ್ಯಕತೆ ಇರುಷ್ಟು ಪರ್ಮಿಟ್‌ನ್ನು ಸರಳೀಕರಣ ಮಾಡಿದರೆ ಅವಶ್ಯಕತೆಗೆ ಅನುಗುಣವಾಗಿ ಸರಕಾರಕ್ಕೆ ರಾಜಧನ ಮುಂಗಡವಾಗಿ ಪಾವತಿಸಿಕೊಂಡು ಪರವಾನಿಗೆ ನೀಡಿದ್ದಲ್ಲಿ ಸರಕಾರಕ್ಕೆ ಕೋಟ್ಯಂತರ ರೂಪಾಯಿ ರಾಜಧನ ಸಂದಾಯವಾಗುತ್ತದೆ. ಉಸುಕು ಸಾಗಾಟಕ್ಕೆ ನಿಗದಿತ ಮಾನದಂಡ ರೂಪಿಸಿದರೆ ಅಕ್ರಮಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂದು ಹೇಳಿದರು.
ತಾಲೂಕಾ ಸಂಘದ ಅಧ್ಯಕ್ಷ ಮಾಧವ ನಾಯಕ್, ಅನಿಲ್ ಕುಮಾರ್ ಮಾಳ್ಸೇಕರ, ಛತ್ರಪತಿ ಮಾಳ್ಸೇಕರ, ಮನೋಜ್ ಕುಮಾರ್ ನಾಯ್ಕ, ರಾಜೇಶ್ ಶೇಟ್, ನಿತಿನ್ ಕೊಳಂಬ್ಕರ್, ರವೀಂದ್ರ, ರೋಹಿದಾಸ್ ಕೋಠಾರ್ಕರ್, ಸತೀಶ್ ವಿ. ನಾಯಕ್. ಪ್ರೀತಂ ಮಸೂರಕರ್, ಕಟ್ಟಡ ಸಂಘದ ಸದಸ್ಯ ದಿನೇಶ ನಾಯ್ಕ, ವಿವೇಕ ಭೋಮ್ಕರ್, ಗಿರೀಶ್ ದೇಸಾಯಿ, ವಿನೋದ ಮುಂತಾದವರು ಉಪಸ್ಥಿತರಿದ್ದರು.