ಕುಮಟಾ: ತಾಲೂಕಿನ ಕೋನಳ್ಳಿಯ ಮಹಾಸತಿ ಕ್ರೀಡಾಂಗಣದಲ್ಲಿ ಶ್ರೀ ಕೋನೇಶ್ವರ ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಲಾದ 27ನೇ ವರ್ಷದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕುಮಟಾದ ದುರ್ಗಾಂಬಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಕೆಸಿಸಿ ಟ್ರೋಫಿ ಪಡೆದುಕೊಂಡಿದೆ.
ಶ್ರೀ ಕೋನೇಶ್ವರ ಕ್ರಿಕೇಟ್ ಕ್ಲಬ್ ಆಯೋಜಿಸಿದ ಈ ಕ್ರಿಕೇಟ್ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸುವ ಮೂಲಕ ಅತ್ಯುತ್ತಮ ಆಟದ ಪ್ರದರ್ಶನ ನೀಡಿದ್ದವು. ಅಂತೀಮವಾಗಿ ಫೈನಲ್ ಪ್ರವೇಶಿಸಿದ ಕುಮಟಾದ ದುರ್ಗಾಂಬಾ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತು. 10 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 122 ರನ್ಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ಈ ರನ್ಗಳ ಬೆನ್ನಟ್ಟಿದ ಉಳ್ಳೂರುಮಠದ ತಂಡವು 8 ವಿಕೆಟ್ಗಳ ನಷ್ಟಕ್ಕೆ 78 ರನ್ಗಳನ್ನು ಮಾತ್ರ ಕಲೆ ಹಾಕುವ ಮೂಲಕ ರನ್ನರ್ ಅಪ್ ಆಯಿತು. ರೋಚಕ ಗೆಲುವು ದಾಖಲಿಸಿದ ದುರ್ಗಾಂಬಾ ತಂಡವು ಪ್ರಥಮ ಬಹುಮಾನ 25 ಸಾವಿರ ರೂ ನಗದು ಹಾಗೂ ಆಕರ್ಷಕ ಕೆಸಿಸಿ ಟ್ರೋಫಿ-2023 ಪಡೆಯುವ ಮೂಲಕ ಛಾಂಪಿಯನ್ ಆದರೆ, ಉಳ್ಳೂರುಮಠ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು.
ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಅವರು ಬಹುಮಾನ ಮತ್ತು ಟ್ರೋಫಿಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶ್ರೀ ಕೋನೇಶ್ವರ ಕ್ರಿಕೇಟ್ ಕ್ಲಬ್ ಗೌರವಾಧ್ಯಕ್ಷ ಎಚ್.ಆರ್.ನಾಯ್ಕ ಕೋನಳ್ಳಿ, ಅಧ್ಯಕ್ಷ ಸುಧಾಕರ ನಾಯ್ಕ, ಪ್ರಮುಖರಾದ ಪ್ರಮೋದ ನಾಯ್ಕ, ಚಿದಾನಂದ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.