ಹೊನ್ನಾವರ: ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಆಡಳಿತ ನಡೆಸುವ ಎಲ್ಲ ವ್ಯವಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತಾಲೂಕಿನ ಮಂಕಿ ಮಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಮೆರಿಟ್ ನಲ್ಲಿ ಆಯ್ಕೆಯಾದ ಶಿಕ್ಷಕರಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಮುಖ್ಯವಾಹಿನಿಗೆ ಬರಬೇಕು ಎನ್ನುವುದು ಸಂವಿಧಾನದ ಆಶಯವಾಗಿದೆ. ಮಕ್ಕಳನ್ನು ಸಮಾಜದ ಒಳ್ಳೆಯ ನಾಗರಿಕನಾಗಿ ಮಾಡುವ ಉದ್ದೇಶ ಎಲ್ಲ ಪಾಲಕರಲ್ಲಿದೆ. ಅದರಂತೆಯೇ ಶಿಕ್ಷಣ ಕ್ಷೇತ್ರದ ಉನ್ನತೀಕರಣವಾಗಿದೆ. ಎಲ್ಲರೂ ಶಿಕ್ಷಣವನ್ನು ಪಡೆಯಬೇಕು. ಉನ್ನತ ಸ್ಥಾನವನ್ನು ಹೊಂದಬೇಕು. ದೇಶಕ್ಕೆ ಕೊಡುಗೆಯನ್ನು ನೀಡಬೇಕು. ಹಲವಾರು ಶಿಕ್ಷಣಪ್ರೇಮಿಗಳ, ದಾನಿಗಳ ಸಹಕಾರದಿಂದ ಮಂಕಿ ಮಡಿ ಶಾಲೆಯು ಸರ್ವಾಂಗೀಣ ಅಭಿವೃದ್ಧಿ ಕಾಣುತ್ತಿದೆ. ಸುವರ್ಣ ಮಹೋತ್ಸವವು ಮಾದರಿ ಕಾರ್ಯಕ್ರಮವಾಗಿದೆ ಎಂದರು.
ಶಾಸಕ ಸುನೀಲ್ ನಾಯ್ಕ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ, ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಇಂದು ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಾಣುತ್ತಿವೆ. ಖಾಸಗಿ ಶಾಲೆಗಳಲ್ಲಿ ಮಾತ್ರ ಗುಣಮಟ್ಟದ ಶಿಕ್ಷಣ ಸಿಗುತ್ತವೆ ಎಂಬ ನಂಬಿಕೆ ಇಂದು ಬದಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರಕುತ್ತಿದೆ. ಈ ಶಾಲೆಗಳಲ್ಲಿ ಕಲಿತವರು ಉನ್ನತ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ. ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರ ಕೊಡಬೇಕು ಎಂದರು.
ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು, ವರ್ಗಾವಣೆಯಾದವರು, ದಾನಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಜಿ.ನಾಯಕ, ತಹಸೀಲ್ದಾರ್ ನಾಗರಾಜ್ ನಾಯ್ಕಡ, ತಾ.ಪಂ. ಇಒ ಸುರೇಶ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಸಮನ್ವಯಾಧಿಕಾರಿ ಎಸ್.ಎಂ.ಹೆಗಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದ ಗಾಂವಕರ್, ಆರ್.ಟಿ.ನಾಯ್ಕ, ಎಂ.ಜಿ.ನಾಯ್ಕ, ಸುರೇಶ ಖಾರ್ವಿ, ರೋಟರಿ ಅಧ್ಯಕ್ಷ ಮಹೇಶ ಕಲ್ಯಾಣಪುರ, ಎಸ್.ಡಿ.ಎಂ.ಸಿ ಮತ್ತು ಸುವರ್ಣ ಮಹೋತ್ಸವ ಸಮಿತಿ ಸದಸ್ಯರು, ಪಾಲಕರು ಉಪಸ್ಥಿತರಿದ್ದರು.
ಮುಖ್ಯಾಧ್ಯಾಪಕ ಉದಯ ನಾಯ್ಕ ಸ್ವಾಗತಿಸಿದರು. ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಹೇಮಂತ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ಅನ್ನಪೂರ್ಣ ನಾಯ್ಕ ಪ್ರಾರ್ಥಿಸಿದರು. ಸುಮಿತ್ರಾ ನಾಯ್ಕ ವರದಿ ವಾಚಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ ಖಾರ್ವಿ ವಂದಿಸಿದರು. ಸುಧೀಶ ನಾಯ್ಕ ನಿರ್ವಹಿಸಿದರು.