ಶಿರಸಿ: ಕೆಟ್ಟ ಹವ್ಯಾಸಗಳು ಮೊದಲು ಹವ್ಯಾಸವಾಗಿ ನಂತರ ಚಟವಾಗಿ, ಅದಕ್ಕೆ ದಾಸನಾಗಿ ವ್ಯಕ್ತಿ ತನ್ನ ಜೀವನವನ್ನು ಹಾಳು ಮಾಡಿಕೊಳ್ಳುತ್ತಾನೆ. ಅದಕ್ಕಾಗಿ ಉತ್ತಮರ ಸಹವಾಸ ಅತಿ ಅವಶ್ಯಕ ಎಂದು ಡಾ.ದಿನೇಶ ಹೆಗಡೆ ಹೇಳಿದರು.
ಅವರು ಎಮ್.ಇ.ಎಸ್. ಕಾನೂನು ಮಹಾವಿದ್ಯಾಲಯದಲ್ಲಿ ಅರುಣೋದಯ ಸಂಸ್ಥೆಯವರು ಸಂಘಟಿಸಿದ್ದ ವಿದ್ಯಾರ್ಥಿಗಳಲ್ಲಿ ವ್ಯಸನಗಳ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಅಶೋಕ ಭಟ್ಕಳ ಮಾತನಾಡಿ, ಮನೆಯಲ್ಲಿ ವಿದ್ಯಾರ್ಥಿಗಳ ಮೇಲೆ ತಂದೆ- ತಾಯಿಯವರ ಋಣಗಳು ಬಹಳವಿದ್ದು, ಅದಕ್ಕೆ ಋಣಿಯಾಗಿ ವಿದ್ಯಾರ್ಥಿಗಳು ಯಾವುದೇ ರೀತಿಯ ವ್ಯಸನಗಳಿಗೆ ದಾಸರಾಗದೆ ಉತ್ತಮ ರೀತಿಯಲ್ಲಿ ಜೀವನವನ್ನು ರೂಪಿಸಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ಸಂಪಾದಿಸಬೇಕು ಎಂದರು.
ಅರುಣೋದಯ ಸಂಸ್ಥೆಯ ವಿನಾಯಕ್ ಶೇಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಅರುಣೋದಯ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಸಮಾಜದ ಏಳಿಗೆಗಾಗಿ ವ್ಯಸನಗಳ ವಿರುದ್ಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಸದರಿ ಕಾರ್ಯಕ್ರಮದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಹೇಳಿ ಎಲ್ಲರನ್ನು ಸ್ವಾಗತಿಸಿದರು.
ವೇದಿಕೆ ಮೇಲೆ ಟ್ರಸ್ಟ್ನ ಟ್ರಸ್ಟಿ ಸುಭಾಶ ಮಂಡೂರು, ಸವಿತಾ ಮಂಡೂರು ಉಪಸ್ಥಿತರಿದ್ದರು. ಕಾರ್ಯಕ್ರದಲ್ಲಿ ಅರುಣೋದಯ ಟ್ರಸ್ಟ್ನ ಕಾರ್ಯಕ್ರಮ ಸಂಯೋಜಕ ಚಂದ್ರಕಾoತ ಪವಾರ ಉಪಸ್ಥಿತರಿದ್ದರು. ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿ ಅಕ್ಷತಾ ಗೌಡ ವಂದಿಸಿದರು ಹಾಗೂ ಪ್ರಿಯಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.