ದಾಂಡೇಲಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಗಣಿತ ಶಿಕ್ಷಕರ ಬಳಗದ ಸಂಯುಕ್ತ ಆಶ್ರಯದಲ್ಲಿ ನಗರದ ಕನ್ಯಾ ವಿದ್ಯಾಲಯದಲ್ಲಿ ಗಣಿತ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಮನೋಮಟ್ಟ ಸುಧಾರಣೆ ಕಾರ್ಯಾಗಾರವು ಯಶಸ್ವಿಯಾಗಿ ಸಂಪನ್ನಗೊ0ಡಿತು.
ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ರಾಘವೇಂದ್ರ ಶೇಠ್ ಉದ್ಘಾಟಿಸಿ ಮಾತನಾಡಿ, ಅತ್ಯಂತ ಜಟಿಲವಾದ ಕಲಿಕೆ ವಿಷಯವಾದ ಗಣಿತವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವ ಹಾಗೆ ಸರಳ ಶೈಲಿಯಲ್ಲಿ ಹೇಳಿಕೊಡುವ ವಿಧಾನವನ್ನು ಕಲಿಸುವ ಪ್ರಯತ್ನದ ಜೊತೆಗೆ ಕಷ್ಟವಾದ ಗಣಿತವನ್ನು ಇಷ್ಟಪಟ್ಟು ವಿದ್ಯಾರ್ಥಿಗಳು ಕಲಿಯಬೇಕಾದ ವಾತಾವರಣವನ್ನು ಸೃಷ್ಟಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.
ಸoಪನ್ಮೂಲ ವ್ಯಕ್ತಿಗಳಾಗಿ ದಿನೇಶ್ ನಾಯ್ಕ ಮತ್ತು ಜನಾರ್ಧನ ಮಡಿವಾಳ ಭಾಗವಹಿಸಿ ಮಾತನಾಡಿ, ಗಣಿತ ವಿಷಯ ಕ್ಲಿಷ್ಟಕರ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಹೋಗಲಾಡಿಸಿ, ಗಣಿತ ಒಂದು ಆಸಕ್ತಿಯ ಅಧ್ಯಯನ ಎಂಬುವುದನ್ನು ಸಾರಬೇಕು. ಅದಕ್ಕೆ ತಕ್ಕುದಾಗಿ ಗಣಿತ ಶಿಕ್ಷಕರನ್ನು ಸನ್ನದ್ಧಗೊಳಿಸುವುದೇ ಈ ಕಾರ್ಯಾಗಾರದ ಆಶಯವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆಯವರು ಭೇಟಿ ನೀಡಿ ಗಣಿತ ಶಿಕ್ಷಕರಿಗೆ ಗಣಿತ ಪಠ್ಯ ಯಾಕೆ, ಹೇಗೆ ಮತ್ತು ಅದರ ಅನಿವಾರ್ಯತೆ ಹಾಗೂ ಗಣಿತ ಬೋಧನಾ ಕ್ರಮಗಳ ಬಗ್ಗೆ ವಿವರಿಸಿ, ಜಟಿಲ ಸಮಸ್ಯೆಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳಿದಾಗ ಸಿಗುವ ಆತ್ಮತೃಪ್ತಿಗೆ ಬೆಲೆ ಕಟ್ಟಲಾಗದು. ಗಣಿತ ಕಷ್ಟ ಹೌದು. ಆದ್ರೆ ಗಣಿತವನ್ನು ಕಲಿಸುವುದು ಕಷ್ಟ ಎನ್ನುವ ಅರಿವಿದ್ದರೂ ಮಕ್ಕಳಿಗೆ ಮನಮುಟ್ಟುವಂತೆ ಕಲಿಸುವ ಗಣಿತ ಶಿಕ್ಷಕರನ್ನು ಯಾವುದೇ ವಿದ್ಯಾರ್ಥಿ ಎಂದೆoದೂ ಮರೆಯಲಾರ ಎನ್ನುವುದನ್ನು ಪ್ರತಿಯೊಬ್ಬ ಗಣಿತ ಶಿಕ್ಷಕ ತಿಳಿದುಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ಯಾ ವಿದ್ಯಾಲಯದ ಮುಖ್ಯಶಿಕ್ಷಕಿ ಸುಜಾತಾ ನಾಯ್ಕ, ಈ ಕಾರ್ಯಾಗಾರವು ಗಣಿತ ಶಿಕ್ಷಕರ ಜ್ಞಾನ ಮಟ್ಟದ ಜೊತೆಗೆ ಕಲಿಕೆಯ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಕನ್ಯಾ ವಿದ್ಯಾಲಯದ ಶಿಕ್ಷಕಿ ರೂಪಾ ಸ್ವಾಗತಿಸಿ, ವಂದಿಸಿದರು. ಮಹಾಂತೇಶ್ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಕನ್ಯಾ ವಿದ್ಯಾಲಯದ ಶಿಕ್ಷಕರುಗಳಾದ ಶಶಿಕಲಾ ಬಂಟ್, ಬಿಜು ನಾಯ್ಕ, ಪಭೀನಾ, ಸುನೀತಾ ಪವಾರ್, ಉಮಾ ಹಿರೇಮಠ ಮೊದಲಾದರು ಸಹಕರಿಸಿದರು. ವೇದಿಕೆಯಲ್ಲಿ ಹಿರಿಯ ಶಿಕ್ಷಕ ಜಿ.ಎಸ್.ಹೆಗಡೆ, ಪೂರ್ಣಿಮಾ ನಾಯ್ಕ ಉಪಸ್ಥಿತರಿದ್ದರು.