ಹೊನ್ನಾವರ: ಪಿಯುಸಿಯಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳೇ ಭವಿಷ್ಯವನ್ನು ರೂಪಿಸುತ್ತದೆ. ಮುಂದಿನ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಸರಿಯಾದ ತೀರ್ಮಾನವನ್ನು ಈಗಲೇ ಮಾಡಿಕೊಳ್ಳಬೇಕು ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಸಿ. ಹೇಳಿದರು.
ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಎಸ್.ಡಿ.ಎಮ್. ಪದವಿಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸ್ಫರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧರಾಗಿರಬೇಕು. ಅರಣ್ಯ ಬೆಳವಣಿಗೆಗೆ ಪೂರಕವಾಗಿ ಕೆಲಸವನ್ನು ಮಾಡಬೇಕು. ಎಸ್.ಡಿ.ಎಮ್. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಎಲ್ಲಾ ತರಬೇತಿಗಳು ಸಹ ನಡೆಯುತ್ತದೆ. ಇದರ ಸಂಪೂರ್ಣ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಚೆನ್ನೈನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಪ್ರಾಧ್ಯಾಪಕ ಹಾಗೂ ಸ್ನಾತಕೋತ್ತರ ಹಿಂದಿ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್ ಎನ್.ಅಂಬಿಗ ಮಾತನಾಡಿ, ಎಸ್.ಡಿ.ಎಮ್ ಕಾಲೇಜಿನ ಹಳೆಯ ದಿನಗಳನ್ನು ಮೆಲುಕು ಹಾಕಿದರು. ಕಾಲೇಜಿನ ಗ್ರಂಥಾಲಯ ಹಾಗೂ ಶಿಕ್ಷಕರಿಂದ ನಾನು ಈ ಹಂತಕ್ಕೇರಲು ಸಾಧ್ಯವಾಯಿತು. ಈಗಿನ ಕಾಲದ ವಿದ್ಯಾರ್ಥಿಗಳಲ್ಲಿ ಶಿಕ್ಷಕರ ಮೇಲೆ ಶ್ರದ್ಧೆ ಕಡಿಮೆ ಆಗುತ್ತಿದೆ. ವಿವೇಕಾನಂದರ ಜೀವನ ನಮ್ಮ ವ್ಯಕ್ತಿತ್ವ ವಿಕಸನಕ್ಕೆ ದಾರಿ ಆಗಿರುತ್ತದೆ. ಅಹಂಕಾರ ಯಾವಾಗ ನಮ್ಮ ಮನಸ್ಸಿಗೆ ಬಂತೋ ಅಲ್ಲಿಗೆ ಆ ವ್ಯಕ್ತಿ ಜೀವನ ಮುಕ್ತಾಯವಾದಂತೆ. ವಿದ್ಯಾರ್ಥಿಗಳು ತಂದೆ- ತಾಯಿ ಬಗ್ಗೆ ಗೌರವವನ್ನು ಇಟ್ಟುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಎಸ್.ಡಿ.ಎಮ್ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ.ವಿಜಯಲಕ್ಷ್ಮಿ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನ ಆವರಣವನ್ನು ಕಸಮುಕ್ತ ಮಾಡಿಟ್ಟುಕೊಳ್ಳಬೇಕು. ಆ ಮೂಲಕ ಪರಿಸರವನ್ನು ಸಂರಕ್ಷಿಸಬೇಕು ಎಂದು ಹೇಳಿದರು.
ಆದರ್ಶವನ್ನಿಟ್ಟುಕೊಂಡು ನಾವು ಜೀವನದಲ್ಲಿ ಮುನ್ನುಗ್ಗಬೇಕು. ಯಾವಾಗಲೂ ಮಾನ್ಯತೆ ಬರುವುದು ವ್ಯಕ್ತಿಗಲ್ಲ. ಬದಲಾಗಿ ವ್ಯಕ್ತಿ ಅಲಂಕರಿಸಿರುವ ಹುದ್ದೆಗೆ. ಶಿಕ್ಷಣಕ್ಕೆ ಇರುವ ಮಾನ್ಯತೆ ಜನರಿಗೆ ಗೊತ್ತಾಗಬೇಕು. ನಮ್ಮ ತನವನ್ನು ನಾವು ಎಂದಿಗೂ ಬಿಡಬಾರದು. ನಾವು ಪಡೆದುಕೊಳ್ಳುವ ಅಂಕ ಸಹಾಯಕ್ಕೆ ಬರದೇ ಇರಬಹುದು, ಆದರೆ ಸಂಸ್ಕಾರ ನಮ್ಮ ಕೈ ಹಿಡಿಯುತ್ತದೆ. ವೃತ್ತಿಯ ಬಗ್ಗೆ ಕೀಳರಿಮೆ ಇರಬಾರದು. ನಾವು ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ನೀಡುತ್ತಿದ್ದೇವೆ ಎಂದು ಅಧ್ಯಕ್ಷತೆ ವಹಿಸಿದ್ದ ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಹೇಳಿದರು.
ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡಾ ಕ್ಷೇತ್ರದಲ್ಲಿ ವಿನೂತನ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ವಿಶೇಷವಾದ ಸನ್ಮಾನ ಮಾಡಲಾಯಿತು. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನ ಪಂಚವಾದ್ಯಗಳ ಮೂಲಕ ವೇದಿಕೆಗೆ ಕರೆತಂದು ಶಾಲುಹೊದೆಸಿ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಎಂ.ಎಚ್.ಭಟ್ ಸ್ವಾಗತಿಸಿದರು. ಸಂಸ್ಕೃತ ಉಪನ್ಯಾಸಕ ವಿನಾಯಕ ಭಟ್ ಅತಿಥಿಗಳನ್ನು ಪರಿಚಯಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹೇಮಾ ಭಟ್ ಹಾಗೂ ಎಂ.ಎನ್.ಅಡಿಗುoಡಿ ನಿರೂಪಿಸಿದರು. ಪಿಯುಸಿ ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕ ಇಮಾಮ್ ಶೇಖ್ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ಜರುಗಿತು.