ದಾಂಡೇಲಿ: ಇಲ್ಲಿನ ದಾಂಡೇಲಿ ಪೊಲೀಸ್ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ಶಿವಾನಂದ ಕಟಗಿಯವರು ಅಧಿಕಾರ ಸ್ವೀಕರಿಸಿದ್ದಾರೆ. ಗಣೇಶ್ ಕೆ.ಎಲ್. ಅವರು ಶಿರಸಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ಬೈಲಹೊಂಗಲದಿoದ ವರ್ಗಾವಣೆಯಾಗಿ ಶಿವಾನಂದ ಕಟಗಿಯವರು ಬಂದಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲುರು ಗ್ರಾಮದ ನಿವಾಸಿಯಾಗಿರುವ ಅವರು, ತನ್ನ ಪ್ರಾಥಮಿಕ ಶಿಕ್ಷಣವನ್ನು ಬೈಲೂರಿನಲ್ಲಿ ಪಡೆದು, ಖಾನಪುರ ತಾಲೂಕಿನ ಇಟಗಿಯ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಪಡೆದು ಮುಂದೆ ಧಾರವಾಡದ ಜೆ.ಎಸ್.ಎಸ್ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಆನಂತರ ಬೆಂಗಳೂರಿನ ದಯಾನಂದ ಸಾಗರ ಇಂಜಿನಿಯರಿoಗ್ ಕಾಲೇಜಿನಲ್ಲಿ ಇಂಜಿನಿಯರಿoಗ್ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲೆ ಪ್ರತಿಭಾನ್ವಿತವಾಗಿ, ಅತ್ಯಂತ ಚುರುಕಿನ ವಿದ್ಯಾರ್ಥಿಯಾಗಿ ಗಮನ ಸೆಳೆದಿದ್ದರು.
ಇಂಜಿನಿಯರಿoಗ್ ಶಿಕ್ಷಣ ಮುಗಿದ ಬೆನ್ನಲ್ಲೆ ಬ್ಯಾಂಕಿoಗ್ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣಗೊಂಡು ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಅಧಿಕಾರಿಯಾಗಿ ಗದಗ ಮತ್ತು ಬೆಳಗಾವಿಯಲ್ಲಿ ಕೆಲ ವರ್ಷಗಳವರೆಗೆ ಸೇವೆಯನ್ನು ಸಲ್ಲಿಸಿದ್ದರು. 2016-17ರಲ್ಲಿ ಆಹಾರ ವಿಭಾಗದ ಅಧಿಕಾರಿಯಾಗಿ ನೇಮಕಗೊಂಡು ಸೇವೆಯನ್ನು ಆರಂಭಿಸಿದರು. ಇದೇ ಸಂದರ್ಭದಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಿವಾನಂದ ಕಟಗಿಯವರು ಡಿವೈಎಸ್ಪಿಯಾಗಿ ನೇಮಕಗೊಂಡರು. 2017-18 ರಲ್ಲಿ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು, ಅಲ್ಲಿಂದ 2018-19 ರವರೆಗೆ ಧಾವರಾಡದಲ್ಲಿ ಪ್ರೋಬೇಷನರಿ ಡಿವೈಎಸ್ಪಿಯಾಗಿ ಸೇವೆಯನ್ನು ಸಲ್ಲಿಸಿ, ಮುಂದೆ ನರಗುಂದ ಪೊಲೀಸ್ ಉಪ ವಿಭಾಗಕ್ಕೆ ಡಿವೈಎಸ್ಪಿಯಾಗಿ ವರ್ಗಾವಣೆಗೊಂಡು 2019-20 ರವರೆಗೆ ಸೇವೆಯನ್ನು ಸಲ್ಲಿಸಿದ್ದರು. ಆನಂತರ 2020 ರಿಂದ ಡಿಸೆಂಬರ್ 2022ರವರೆಗೆ ಬೈಲಹೊಂಗಲದಲ್ಲಿ ಡಿವೈಎಸ್ಪಿಯಾಗಿ ತನ್ನ ಜನಸ್ನೇಹಿ ನಡವಳಿಕೆಗಳಿಂದಲೆ ಗುರುತಿಸಿಕೊಂಡಿದ್ದರು. ಇದೀಗ ದಾಂಡೇಲಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿಯಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.