ಕುಮಟಾ: ಐದು ನೂರು ವರ್ಷಗಳ ಇತಿಹಾಸವಿರುವ ತಾಲೂಕಿನ ಸಂತೇಗುಳಿಯ ಶಕ್ತಿ ದೇವತೆ ಶ್ರೀವನದುರ್ಗಾ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ದಾನಿಗಳ ಸಹಕಾರವನ್ನು ಗ್ರಾಮಸ್ಥರು ಯಾಚಿಸಿದ್ದಾರೆ.
ತಾಲೂಕಿನ ಸಂತೇಗುಳಿ ಭಾಗದ ಇಷ್ಟಾರ್ಥಗಳನ್ನು ಕರುಣಿಸುವ ಶ್ರೀವನ ದುರ್ಗಾ ದೇವಾಲಯದ ಕಟ್ಟಡ ನಿರ್ಮಾಣಕ್ಕೆ 2019 ರಲ್ಲಿ ಇಲ್ಲಿನ ಹಿರಿ- ಕಿರಿಯರೆಲ್ಲರೂ ಸೇರಿ ಅಡಿಗಲ್ಲು ಮೂಹೂರ್ತ ನೆರವೇರಿಸಿದ್ದರು. ಇಲ್ಲಿನ ಸಾರ್ವಜನಿಕರೇ ತಮ್ಮ ಕೈಲಾದಷ್ಟು ಹಣ ಸಂಗ್ರಹಿಸಿ, ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. ಈಗ ಕಟ್ಟಡ ಪೂರ್ಣಗೊಳಿಸಲು ಜನಪ್ರತಿನಿಧಿಗಳು ಮತ್ತು ದಾನಿಗಳ ಸಹಕಾರ ಬೇಕಾಗಿದೆ. ಸುಮಾರು 500 ವರ್ಷದ ಇತಿಹಾಸ ಹೊಂದಿರುವ ದೇವಿಗೆ ದೀಪಾವಳಿ, ಸಂಕ್ರಾoತಿ, ಗಡಿಹಬ್ಬ, ಕಾರ್ತಿಕ ಹಾಗೂ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿoದ ಆಚರಿಸಲಾಗುತ್ತದೆ. ಆದರೆ ದೇವರಿಗೆ ಸುಂದರ ಕಟ್ಟಡವಿಲ್ಲ ಎಂಬ ಕೊರಗು ಸ್ಥಳೀಯ ಭಕ್ತರನ್ನು ಕಾಡಿತ್ತು. ಹಾಗಾಗಿ ಭಕ್ತರೆಲ್ಲ ಸೇರಿಕೊಂಡು ದೇವಾಲಯದ ಟ್ರಸ್ಟ್ ರಚಿಸಿಕೊಂಡು ಅಲ್ಪ ಸ್ವಲ್ಪ ಹಣ ಸಂಗ್ರಹಿಸಿ, ದೇವಸ್ಥಾನದ ಗೋಪುರ ನಿರ್ಮಿಸಿದ್ದಾರೆ. ಇನ್ನೂ ಮುಂದಿನ ಕಾಮಗಾರಿ ನಡೆಸಲು ಹಣಕಾಸಿ ತೊಂದರೆಯಾಗಿದೆ. ಹಾಗಾಗಿ ಶಾಸಕರು, ಜನಪ್ರತಿನಿಧಿಗಳು ಮತ್ತು ದಾನಿಗಳು ದೇವಸ್ಥಾನ ಜೀರ್ಣೋದ್ಧಾರಕ್ಕೆ ಅಗತ್ಯ ನೆರವು ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ತಾಲೂಕು ಕೇಂದ್ರದಿoದ ಸುಮಾರು 28 ಕಿ.ಮೀ ದೂರದಲ್ಲಿರುವ ಸಂತೇಗುಳಿಯ ಶ್ರೀವನದುರ್ಗಾ ಅನಾಧಿಕಾಲದ ದೇವರು ಎಂದು ನಮ್ಮ ಪೂರ್ವಜರು ಹೇಳುತ್ತಿದ್ದರು. ಈ ಪ್ರದೇಶದಲ್ಲಿ ಜೈನರ ಕಾಲದ ಪಳಿಯುಳಿಕೆಗಳು ಕಂಡುಬರುತ್ತಿವೆ. ದೇವರನ್ನು ಉತ್ಕಲನ ಮಾಡಿದಾಗ ಕುಂಭಗಳು ದೊರೆತಿವೆ. ಮಣ್ಣಿನ ಕಟ್ಟೆಯ ಮೇಲೆ ಸ್ಥಾಪನೆಯಾದ ಪ್ರಾಚೀನ ದೇವರಿಗೆ ಸುಂದರ ದೇವಸ್ಥಾನ ನಿರ್ಮಿಸಬೇಕು ಎಂಬ ಅಭಿಲಾಷೆಯನ್ನು ಹೊಂದಿ ಸಂತೇಗುಳಿ ಗ್ರಾಮಸ್ಥರೆಲ್ಲರೂ ಸೇರಿ ಸುಮಾರು 15 ಲಕ್ಷ ರೂ. ಖರ್ಚಿನಲ್ಲಿ ದೇವಸ್ಥಾನ ನಿರ್ಮಿಸಲು ಕೈ ಹಾಕಿದ್ದೇವೆ. ದಾನಿಗಳು ಧನ ಸಹಾಯ ನೀಡಿದರೆ ಕಟ್ಟಡ ಕಾಮಗಾರಿ ಮುಂದುವರೆಸಲು ಸಹಕಾರಿಯಾಗುತ್ತದೆ ಎಂದು ಸ್ಥಳೀಯ ಗ್ರಾಮಸ್ಥ ವಿನಾಯಕ ನಾಯ್ಕ ವಿನಂತಿಸಿಕೊoಡರು.
20 ಲಕ್ಷ ಖರ್ಚಿನ ಅಂದಾಜು
ನಮ್ಮ ಊರಿನಲ್ಲಿರುವುದು ಒಂದೇ ದೇವಾಲಯ. ಉಳಿದವು ಪರಿವಾರದ ದೇವರು. ಹಾಗಾಗಿ ಈ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಈಗಾಗಲೇ ಸುಮಾರು 15 ಲಕ್ಷ ಖರ್ಚಾಗಿದ್ದು, ಮೂರ್ತಿ ಪ್ರತಿಷ್ಠಾಪನೆ ಸೇರಿದಂತೆ ಕಟ್ಟಡ ಉಳಿದ ಕೆಲಸಗಳಿಗೆ ಸುಮಾರು 20 ಲಕ್ಷ ಖರ್ಚು ತಗುಲಬಹುದು ಎಂದು ಇಂಜೀನಿಯರ್ ತಿಳಿಸಿದ್ದಾರೆ. ದಾನಿಗಳು ತಮ್ಮ ಕೈಲಾದಷ್ಟು ದೇಣಿಗೆ ನೀಡಿದರೆ ದೇವರಿಗೆ ಉತ್ತಮ ದೇವಸ್ಥಾನ ನಿರ್ಮಿಸಲು ಸಾಧ್ಯ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶೇಖರ ನಾಯ್ಕ, ವರದರಾಜ ನಾಯ್ಕ, ಶಿವರಾಜ ನಾಯ್ಕ, ಸಂಜೀತ ನಾಯ್ಕ, ಮಣಿಕಂಠ ನಾಯ್ಕ, ಸಚಿನ ನಾಯ್ಕ, ನಿತಿನ ನಾಯ್ಕ, ಕುಬೇರ ನಾಯ್ಕ, ಶಂಕರ ನಾಯ್ಕ, ಶಿವಾನಂದ ಗುನಗಾ ಹಾಗೂ ನಿತ್ಯಾನಂದ ಗುನಗಾ ವಿನಂತಿಸಿಕೊoಡರು.