ದಾಂಡೇಲಿ: ನಗರದ ಬಂಗೂರನಗರ ಪದವಿ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ನಯನಾ ರೇವಣಕರ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿಯ ಗೌರವ ಲಭಿಸಿದೆ.
ಕಳೆದ 31 ವರ್ಷಗಳಿಂದ ಬಂಗೂರ ನಗರ ಪದವಿ ಮಹಾ ವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕಿಯಾಗಿ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ಅತ್ಯುತ್ತಮವಾದ ಸೇವೆಯನ್ನು ಸಲ್ಲಿಸುತ್ತಾ ಬಂದಿರುವವರು ನಯನಾ ರೇವಣಕರ. ಅವರು ಕಾಲೇಜಿನ ಆಡಳಿತ ಮಂಡಳಿಯ ಸಹಕಾರದಡಿ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ.ಗಿರೀಶ್ ಜಿ.ಕಾಡದೇವರ ಮಾರ್ಗದರ್ಶನದಲ್ಲಿ ಲಿಮ್ನೋ ಲಾಜಿಕಲ್ ಸ್ಟಡೀಸ್ ಆಫ್ ಸಮ್‌ಲೆಂಟಿಕ್ ಹ್ಯಾಬಿಟಾಟ್ಸ್ ಆಫ್ ಕಾಳಿ ಟೈಗರ್ ರಿಸರ್ವ್ ಎಂಬ ಸಂಶೋಧನಾ ಮಹಾಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು. ಇದೀಗ ಕರ್ನಾಟಕ ವಿಶ್ವ ವಿದ್ಯಾಲಯವು ನಯನಾ ರೇವಣಕರ ಅವರ ಸಂಶೋಧನಾ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿಯನ್ನು ಘೋಷಣೆ ಮಾಡಿದೆ.
ಪಿಎಚ್‌ಡಿ ಪದವಿಗೆ ಭಾಜನಾರಾದ ನಯನಾ ರೇವಣಕರ ಅವರು ಸಹಕರಿಸಿದ ಕಾಲೇಜಿನ ಆಡಳಿತ ಮಂಡಳಿಗೆ ಮತ್ತು ಮಾರ್ಗದರ್ಶನ ನೀಡಿದ ಡಾ.ಗಿರೀಶ್ ಜಿ.ಕಾಡದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಪಿ.ಎಚ್.ಡಿ ಪದವಿಗೆ ಭಾಜನರಾದ ನಯನಾ ರೇವಣಕರ ಅವರನ್ನು ನಗರದ ಗಣ್ಯರನೇಕರು ಅಭಿನಂದಿಸಿದ್ದಾರೆ.