ಹೊನ್ನಾವರ: ಹವ್ಯಕ ವಿಕಾಸ ವೇದಿಕೆಯ ವತಿಯಿಂದ 11ನೇ ವರ್ಷದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯು ತಾಲೂಕಿನ ಸಂತೇಗುಳಿಯ ಮಹಾಸತಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಅಂತಿಮ ಪಂದ್ಯಾವಳಿಯ ನಾಣ್ಯ ಚಿಮ್ಮುವಿಕೆಯನ್ನು ರಾಘವೇಶ್ವರ ಭಾರತೀ ಸ್ವಾಮೀಜಿಯವರು ನೇರವೇರಿಸಿ, ಫೈನಲ್ ಪಂದ್ಯಾವಳಿಯ ಎರಡು ತಂಡದ ಆಟಗಾರರಿಗೆ ಶುಭಾಶಯ ತಿಳಿಸಿದರು. ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ಸಿದ್ದಾಪುರದ ನಿಸರ್ಗ ತಂಡ, ರನ್ನರ್ ಅಪ್ ಆಗಿ ಸಂತೇಗುಳಿಯ ಬಾನಗಡಿ ತಂಡ ಪಡೆದುಕೊಂಡಿತು. ರಾಜ್ಯದೆಲ್ಲೆಡೆಯ 26 ತಂಡಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಸಮಾರೋಪ ಸಮಾರಂಭ ಉದ್ದೇಶಿಸಿ ರಘುವೀರ ಭಾಗ್ವತ ಮಾತನಾಡಿ, 11 ವರ್ಷಗಳಿಂದ ಅನೇಕ ಕ್ರೀಡಾಪಟುಗಳನ್ನು ಈ ವೇದಿಕೆ ಪರಿಚಯಿಸಿ ಪ್ರೋತ್ಸಾಹಿಸಿದೆ ಎಂದು ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತ ಉಪತಹಶೀಲ್ದಾರ ಎಲ್.ಎ.ಭಟ್ಟ ಮಾತನಾಡಿ, ಪ್ರತಿವರ್ಷವು ಹಲವು ಪಂದ್ಯಾವಳಿಗೆ ಈ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಮುಂದಿನ ಪೀಳಿಗೆಗೆ ಹಲವು ಕ್ರೀಡಾಪಟುಗಳನ್ನು ಪರಿಚಯಿಸಲಿದೆ ಎಂದರು.
ವೇದಿಕೆಯ ಅಧ್ಯಕ್ಷ ವೆಂಕ್ರಟಮಣ ಹೆಗಡೆ ಮಾತನಾಡಿ, ಬೇರೆ ಬೇರೆ ಭಾಗದಲ್ಲಿದ್ದ ಸಮಾಜದವರು ಒಂದಡೆ ಸೇರಲು ಈ ಕ್ರೀಡಾಕೂಟ ಹಮ್ಮಿಕೊಳ್ಳುತ್ತಿದೆ. ಯಶ್ವಸಿ 11 ವರ್ಷ ಪೂರೈಸಲಾಗಿದೆ. ಸ್ನೇಹಕ್ಕಾಗಿ ಕ್ರೀಡೆ ಆಯೋಜಿಸುತ್ತಾ ಬಂದಿದ್ದು, ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶ್ವಸಿಯಾಗಿದೆ ಎಂದರು.
ವಿಜೇತ ತಂಡಗಳಿಗೆ ಪ್ರತಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಕ ವಿ.ಜಿ.ಹೆಗಡೆ, ಚಾಂಪಿಯನ್ ತಂಡದ ನಾಯಕ ಪ್ರವೀಣ ಬೂಸಾ, ರನ್ನರ್ ಅಪ್ ತಂಡದ ನಾಯಕ ನಿರಂಜನ ದೊಡ್ಮನಿ, ಗ್ರಾ.ಪಂ. ಸದಸ್ಯ ಎಚ್.ಆರ್.ಗಣೇಶ ಮತ್ತಿತರರು ಇದ್ದರು.