ಮುಂಡಗೋಡ: ದುಡಿಮೆಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಗುಳೆ ಹೋಗುವುದನ್ನು ತಪ್ಪಿಸಿ ದುಡಿಯುವ ಕೈಗಳಿಗೆ ಸ್ಥಳೀಯವಾಗಿ ಉದ್ಯೋಗ ನೀಡುವ ಉದ್ದೇಶದಿಂದ ಗ್ರಾಮೀಣ ಜನರಿಗೆ ಕೂಲಿ ಕೆಲಸ ನೀಡಲಾಗುತ್ತಿದ್ದು, ಪ್ರತಿ ಕುಟುಂಬಕ್ಕೂ ಉದ್ಯೋಗ ಖಾತರಿ ಕೆಲಸ ತಲುಪುವಂತೆ ಮಾಡಲು ಸ್ವ-ಸಹಾಯ ಗುಂಪುಗಳ ಸದಸ್ಯರುಗಳಿಗೆ ನರೇಗಾ ಯೋಜನೆಯ ಅಗತ್ಯ ಮಾಹಿತಿಯನ್ನು ನೀಡಲಾಯಿತು.
ಲಯೋಲ ವಿಕಾಸ ಕೇಂದ್ರದಲ್ಲಿ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ, ನರೇಗಾ ಮಾಹಿತಿ ವಿನಿಮಯ, ಜಲ ಸಂಜೀವಿನಿ ವೈಜ್ಞಾನಿಕ ಕ್ರಿಯಾ ಯೋಜನೆ ತಯಾರಿಕೆ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಲ್ವಿಕೆ ಸ್ವ-ಸಹಾಯ ಒಕ್ಕೂಟದ ಸದಸ್ಯರಿಗೆ ಉದ್ಯೋಗ ಖಾತರಿ ಯೋಜನೆಯ ಹುಟ್ಟು, ಉದ್ದೇಶ, ಕಾಮಗಾರಿಗಳು ಹಾಗೂ ಗುರಿ ಸಾಧನೆಯ ಬಗೆಗೆ ತಾಲ್ಲೂಕು ಪಂಚಾಯತ್ ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ವಿವರಿಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 60 ವರ್ಷ ಮೇಲ್ಪಟ್ಟವರು, ವಿಕಲಚೇತನರು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಕೆಲಸದಲ್ಲಿ ಶೇ 50ರಷ್ಟು ವಿನಾಯಿತಿ ನೀಡಲಾಗುತ್ತಿದೆ. ಸ್ವ-ಸಹಾಯ ಗುಂಪಿನ ಸದಸ್ಯರಿಗೆ ನರ್ಸರಿ ಮಾಡಿಕೊಳ್ಳಲು ನೆರವು ದೊರೆಯುತ್ತಿದೆ. ಹಾಗೇ ಪೌಷ್ಠಿಕ ಕೈತೋಟ ಮತ್ತು ಇತರೆ ಕಾಮಗಾರಿಗಳು ಸಹಿತ ಲಭ್ಯವಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲಯೋಲ ವಿಕಾಸ ಸಂಸ್ಥೆಯ ಮಂಗಳಾ ಮೋರೆ, ಮಲ್ಲಮ್ಮ ನೀರಲಗಿ, ಲವೀನಾ, ನಕ್ಲುಬಾಯಿ ಕೊಕರೆ, ತೇಜಸ್ವಿನಿ ಹಾಗೂ ಲಯೋಲ ಸ್ವ ಸಹಾಯ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.