ಕುಮಟಾ: ತಾಲೂಕಿನ ಮಿರ್ಜಾನ್ ಮುಗ್ವೆಖಾನವಾಡಿಯಲ್ಲಿ ಪಿಡಬ್ಲುಡಿಯು ಉದ್ದೇಶಿಸಲಾದ ಕಿರು ಸೇತುವೆ ಕಾಮಗಾರಿಗೆ ವ್ಯಕ್ತಿಯೋರ್ವರು ಅಡ್ಡಿಪಡಿಸುತ್ತಿರುವ ಮಾಹಿತಿ ಪಡೆದ ಸ್ಥಳೀಯರು, ಗ್ರಾ.ಪಂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಮಿರ್ಜಾನ್ ಗ್ರಾಪಂ ವ್ಯಾಪ್ತಿಯ ಮುಗ್ವೆಖಾನವಾಡಿಯಲ್ಲಿ ಮಳೆ ನೀರು ಹರಿದು ಹೋಗುವ ಸಿಡಿ ಶಿಥಿಲಗೊಂಡು ಕುಸಿದ ಪರಿಣಾಮ ಮಳೆ ನೀರು ಬ್ಲಾಕ್ ಆಗುವಂತಾಗಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲು ತೊಡಕಾಗಿತ್ತು. ಹಾಗಾಗಿ ಹೊಸ ಸಿಡಿ ನಿರ್ಮಿಸಲು ಸ್ಥಳೀಯರು ಪಿಡಬ್ಲುಡಿಗೆ ಒತ್ತಾಯಿಸಿದ್ದರಿಂದ ಪಿಡಬ್ಲುಡಿ 4.5 ಲಕ್ಷ ರೂ. ವೆಚ್ಚದಲ್ಲಿ ಸಿಡಿ ಇರುವ ಕಿರು ಸೇತುವೆ ನಿರ್ಮಿಸಲು ಮುಂದಾಗಿದ್ದರು.
ಈ ಕಾಮಗಾರಿಗೆ ಸ್ಥಳೀಯರಾದ ಮಂಗಳಾ ನಾಯ್ಕ ಕುಟುಂಬ ವಿರೋಧ ವ್ಯಕ್ತಪಡಿಸಿದ್ದರಿಂದ ಮಿರ್ಜಾನ್ ಗ್ರಾ.ಪಂ ಅಧ್ಯಕ್ಷ ಪರಮೇಶ್ವರ ಪಟಗಾರ ನೇತೃತ್ವದಲ್ಲಿ ಗಣೇಶ, ಅಂಬಿಗ ನಾಗರಾಜ ಅಂಬಿಗ, ವಿನಾಯಕ ನಾಯ್ಕ, ಈಶ್ವರ ಮರಾಠಿ, ಪಿಡಿಓ ಅಮೃತಾ ಭಟ್ಟ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ ರಾಜಾರಾಮ ನಾಯ್ಕ ಕುಟುಂಬದವರಿಗೆ ತಿಳಿಹೇಳಲು ಪ್ರಯತ್ನಿಸಿದರೂ ಒಪ್ಪದಿದ್ದಾಗ ಪೋಲಿಸರನ್ನು ಸ್ಥಳಕ್ಕೆ ಕರೆಯಿಸಲಾಯಿತು.
ಸ್ಥಳಕ್ಕಾಗಮಿಸಿದ ಪಿಎಸ್ಐ ಪದ್ಮ ಅವರು, ಸಿವಿಲ್ ಮ್ಯಾಟರ್ ಆಗಿದ್ದರಿಂದ ನಾವು ಮಧ್ಯ ಪ್ರವೇಶಿಸಲು ಬರುವುದಿಲ್ಲ ಎಂದು ತಿಳಿಸಿದಾಗ, ಪಂಚಾಯತ್ ಸದಸ್ಯರು ಸ್ಥಳಕ್ಕೆ ಸಹಾಯಕ ಆಯುಕ್ತರಾದ ರಾಘವೇಂದ್ರ ಜಗಾಸರ್ ಅವರನ್ನು ಕರೆಯಿಸಿ, ಈ ಪ್ರಕರಣವನ್ನು ಇತ್ಯರ್ಥ ಪಡಿಸುವಂತೆ ಆಗ್ರಹಿಸಿದರು. ಗ್ರಾಮದ ನಕಾಶೆ ತರಿಸಿ ಕೂಲಂಕೂಷವಾಗಿ ಪರಿಶೀಲಿಸಿದ ಸಹಾಯಕ ಆಯುಕ್ತರು, ವಿರೋಧ ವ್ಯಕ್ತಪಡಿಸಿದ ಕುಟುಂಬವನ್ನು ಕರೆಯಿಸಿ, ನಿಮ್ಮ ಸ್ಥಳದ ಸರ್ವೆ ನಂ 25 ಹೊರತುಪಡಿಸಿ ಹೊಸದಾಗಿ ಸರ್ವೆ ನಡೆಸಿ ಗಡಿ ಗುರುತು ಮಾಡಿ, ಕಾಮಗಾರಿ ಆರಂಭಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮಿರ್ಜಾನ್ ಗ್ರಾ.ಪಂ ಸದಸ್ಯ ನಾಗರಾಜ ನಾಯ್ಕ, ಖಂಡಗಾರ ಎತ್ತಿನಬೈಲ್ಗೆ ಹೋಗಲು 15 ಕಿ.ಮಿ ರಸ್ತೆ ಇದಾಗಿದೆ. ಮಾಲ್ಕಿ ಜಾಗದಲ್ಲಿ ರಸ್ತೆ ಹಾದು ಹೋದ ಬಗ್ಗೆ ಆರ್ಟಿಸಿಯಲ್ಲಿ ಎಂಟ್ರಿ ಇಲ್ಲ. ಬಹು ಕಾಲದ ಹಿಂದೆ ಕಿರು ಸೇತುವೆಯ ಕೆಳಭಾಗದಲ್ಲಿದ್ದ ಸಿಡಿ ಒಡೆದು ಹೋಗಿದ್ದರಿಂದ ಲೋಕೊಪಯೋಗಿ ಇಲಾಖೆ ನೂತವಾಗಿ ನಿರ್ಮಿಸಲು ಮುಂದಾಗಿದೆ. ಅದಕ್ಕೆ ರಾಜಾರಾಮ ನಾಯ್ಕ ಹಾಗೂ ಕುಟುಂಬದವರು ತಡೆಯೊಡ್ಡಿದಾರೆ. ಸಾರ್ವಜನಿಕರು ಎಷ್ಟೇ ಮನವಿ ಮಾಡಿದರು ಕೇಳುತ್ತಿಲ್ಲ. ಕಂದಾಯ ಇಲಾಖೆಯವರು ಸಾರ್ವಜನಿಕರಿಗೆ ಅನೂಕೂಲವಾಗಿವಂತೆ ಕಿರು ಸೇತುವೆ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.
ಕೋಟ್…
ಮುಗ್ವೆಖಾನ ಗ್ರಾಮದ ಸರ್ವೆ ನಂ 25 ಹಿಸ್ಸಾ 8 ಅ ಕ್ಷೇತ್ರ 2-9-0 ಹಾಗೂ ಸರ್ವೆ ನಂ 25 ಹಿಸ್ಸಾ 6 ಕ್ಷೇತ್ರ 30 ಗುಂಟೆ ಖುದ್ದು ಮಾಲಕಿಯದಾಗಿದ್ದು, ಸದ್ರಿ ಸರ್ವೆ ನಂಬರಲ್ಲಿ ಯಾವುದೇ ಸಾರ್ವಜನಿಕ ಕರಾಬು ಇಲ್ಲ. ನನ್ನ ಹಕ್ಕಿನ ಸ್ಥಳದಲ್ಲಿ ಪೂರ್ವಾನುಮತಿ ಇಲ್ಲದೆ ಬಲತ್ಕಾರವಾಗಿ ಸೇತುವೆ ನಡೆಸಲು ಹುನ್ನಾರ ನಡೆಸುತ್ತಿದ್ದಾರೆ.ನೂತನ ಸೇತುವೆ ನಿರ್ಮಿಸಿ ಹಳ್ಳವನ್ನು ತಿರುವುಗೊಳಿಸಿದಲ್ಲಿ ನನ್ನ ಸ್ಥಳದಲ್ಲಿ ನೀರು ನುಗ್ಗಿ ಬೆಳೆ ಹಾನಿಯಾಗುತ್ತದೆ. ಮನೆಗೆ ನೀರು ತುಂಬಿ ತೀವ್ರ ತೊಂದರೆಯಾಗುತ್ತದೆ.
• ಮಂಗಳಾ ನಾಯ್ಕ, ಜಮೀನು ಮಾಲಕರು