ಶಿರಸಿ: ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸಂಬoಧಿಸಿದ ಕುಂದುಕೊರತೆಗಳ ಕುರಿತಾದ ಕ್ರಿಯಾಯೋಜನೆ ತಯಾರಿಸುವ ಉದ್ದೇಶದಿಂದ ವಿಶೇಷ ಗ್ರಾಮಸಭೆ ಹಾಗೂ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ನಡೆಸಲಾಗುತ್ತಿದೆ.
ಶುಕ್ರವಾರ ತಾಲೂಕಿನ ಹುತ್ಗಾರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ವಿಶೇಷ ವಿಶೇಷ ಗ್ರಾಮ ಸಭೆ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದೂರದೃಷ್ಠಿ ಯೋಜನೆ ಮತ್ತು ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ಆಚರಿಸಲಾಯಿತು.
ನರೇಗಾ ಯೋಜನೆ ಹಾಗೂ ಅದರ ರೂಪುರೇಷೆಗಳು, ಖಾತರಿಯಡಿ ಇರುವ ಸೌಲಭ್ಯಗಳು, ಮತ್ತು ಪ್ರತಿ ಕುಟುಂಬಕ್ಕೆ ಜೀವಿತಾವಧಿಯವರೆಗೆ ನೀಡುವ ಸಹಾಯಧನ, ಹಾಗೂ ಕಾಮಗಾರಿಗಳ ಸಂಪೂರ್ಣ ಮಾಹಿತಿ, ವಿಕಲಚೇತನರಿಗೆ ನರೇಗಾದಡಿ ಉದ್ಯೋಗ ಚೀಟಿ ಮತ್ತು ಕೆಲಸದಲ್ಲಿ ವಿನಾಯಿತಿ ಕುರಿತು ಮಾಹಿತಿ ನೀಡಲಾಯಿತು.
ಇನ್ನು ಸರ್ಕಾರದಿಂದ ಮಹಿಳೆಯರು ಮತ್ತು ಮಕ್ಕಳಿಗೆ ಇರುವ ಸೌಲಭ್ಯಗಳಾದ ಸಹಾಯವಾಣಿ ಕೇಂದ್ರ, ಆಪ್ತ ಸಮಾಲೋಚನ ಕೇಂದ್ರ, ಶಿಶುಪಾಲನಾ ಕೇಂದ್ರ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಸುರಕ್ಷತಾ ಹಾಗೂ ಮುನ್ನಚ್ಚರಿಕಾ ಕ್ರಮಗಳು ಬಗ್ಗೆ ಮತ್ತು ವಿಶೇಷ ಚೇತನರಿಗೆ ಮೂಲಭೂತ ಸೌಕರ್ಯಗಳ ಕುರಿತು ನುರಿತರಿಂದ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಲತಾ ಮಡಿವಾಳ, ಉಪಾಧ್ಯಕ್ಷ ಶೇಖರ್ ಮಡಿವಾಳ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಿವಕುಮಾರ್ ಎಮ್ ಪಿ, ತಾಲೂಕು ಪಂಚಾಯತ್ ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ, ಎನ್‌ಆರ್‌ಎಲ್‌ಎಮ್ ವಲಯ ಮೇಲ್ವಿಚಾರಕಿ ಶಿಲ್ಪಾ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು, ನೂಡಲ್ ಅಧಿಕಾರಿ, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಇದ್ದರು.