ಸಿದ್ದಾಪುರ : ಕ್ರೀಡೆ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಸದೃಢಗೊಳಿಸುತ್ತದೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಆರೋಗ್ಯ ಕಾಯ್ದುಕೊಳ್ಳಿ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅವರು ಹೇಳಿದರು. ಅವರು ತಾಲೂಕಿನ ಮನ್ಮನೆಯಲ್ಲಿ ಶ್ರೀ ಕಟ್ಟೆ ಬೀರಪ್ಪ ಗೆಳೆಯರ ಬಳಗ ಹಾಗೂ ಊರ ನಾಗರಿಕರ ಸಹಕಾರದೊಂದಿಗೆ ಆಯೋಜಿಸಲಾದ ದ್ವಿತೀಯ ವರ್ಷದ ಮ್ಯಾಟ್ ಮಾದರಿಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯ ಅಂಕಣ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಯು ನಶಿಸಿ ಹೋಗಿದೆ. ಪುನಃಶ್ಚೇತನ ಮಾಡಲಿಕ್ಕೆ ಗ್ರಾಮೀಣ ಯುವಕರು ಕಬಡ್ಡಿ ಪಂದ್ಯಾವಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿದ್ದಾರೆ. ಕ್ರೀಡೆಯು ದೈಹಿಕವಾಗಿ, ಮಾನಸಿಕವಾಗಿ ದೇಹದ ಆರೋಗ್ಯದ ಬಗ್ಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೋಸ್ಕರವಾಗಿ ಕ್ರೀಡೆಯನ್ನು ನಡೆಸಬೇಕೆಂದು ಯುವಕರಿಗೆ ಕರೆ ನೀಡಿದರು.
ಕ್ರೀಡೆಗೆ ಯಾವುದೇ ಜಾತಿ ಧರ್ಮಗಳಿಲ್ಲ. ವರ್ಗ ಸಂಘರ್ಷಗಳು ಸಹ ಇಲ್ಲ. ಇದು ಗ್ರಾಮದ, ಸಮಾಜದ ನಡುವೆ ಸ್ನೇಹ, ಶಾಂತಿ, ಸೌಹಾರ್ದಕ್ಕೆ ಕಾರಣವಾಗಿದೆ. ಪುರಾತನವಾದ ಕಬಡ್ಡಿ ಆಟವು ಭಾರತದ ಗ್ರಾಮೀಣ ಕ್ರೀಡೆ ಆಗಿದೆ. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆಯನ್ನು ಜೊತೆಗೆ ಹೆಸರನ್ನೂ ತಂದು ಕೊಟ್ಟಿದೆ ಎಂದರು. ಈ ಸಂದರ್ಭದಲ್ಲಿ ವಸಂತ ನಾಯ್ಕ ಮನ್ಮನೆ, ವಿ ಎನ್ ನಾಯ್ಕ ಬೇಡ್ಕಣಿ, ನಾಸಿರ ವಲ್ಲಿ ಖಾನ್ ಮನ್ಮನೆ, ಸಿ.ಆರ್. ನಾಯ್ಕ ಲಂಬಾಪುರ, ಭೀಮಣ್ಣ ನಾಯ್ಕ, ಸಿ ಟಿ ಮಂಜು, ಪಂಚಾಯತ್ ಸದಸ್ಯರು, ಅಧ್ಯಕ್ಷರು, ಊರಿನ ಹಿರಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಕ್ರೀಡಾ ಅಭಿಮಾನಿಗಳು ಉಪಸ್ಥಿತರಿದ್ದರು.