ಶಿರಸಿ : ಶಿರಸಿ ಜಿಲ್ಲೆ ಕೇವಲ ಹೇಳಿಕೆಗಷ್ಟೇ ಸೀಮಿತವಾಗದೇ ಈ ಕುರಿತು ಮುಖ್ಯಮಂತ್ರಿಗಳಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಬೇಕು ಎಂದು ಕಾಂಗ್ರೆಸ್ ಮುಖಂಡ ದೀಪಕ ದೊಡ್ಡೂರು ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ಆಯೋಜಸಿ ಮಾತನಾಡಿದ ಅವರು, ಬಿಜೆಪಿ ನಾಯಕರು ಶಿರಸಿ ಜಿಲ್ಲೆ ಮಾಡುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ ಎನ್ನುವ ಹೇಳಿಕೆ ನೀಡುತ್ತಿದ್ದಾರೆ. ಇಂಥ ಹೇಳಿಕೆ ನೀಡುವ ಬಗ್ಗೆ ಆಕ್ಷೇಪವಿಲ್ಲ. ಆದರೆ ಇದು ಕೇವಲ ಹೇಳಿಕೆಗೆ ಸೀಮಿತವಾಗದೇ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ಚುನಾವಣೆ ದೃಷ್ಟಿಕೋನದಿಂದ ಶಿರಸಿ ಜಿಲ್ಲೆ ಹೇಳಿಕೆ ನೀಡಿದ್ದರೆ ಅದಕ್ಕೆ ನಮ್ಮ ವಿರೋಧವಿದೆ. ಆದರೆ ಶಿರಸಿ ಜಿಲ್ಲೆಯ ಅನುಷ್ಠಾನದ ವಿಚಾರದಲ್ಲಿ ಪಕ್ಷಾತೀತ ಬೆಂಬಲ ನೀಡಲಿದ್ದೇವೆ. ಈ ಹಿಂದೆ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡುವ ಭರವಸೆ ನೀಡಿ ಹೇಳಿಕೆ ನೀಡಲಾಗಿತ್ತು. ಆದರೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವಿಚಾರವಾಗಿ ಮುಖ್ಯಮಂತ್ರಿಗೆ ಯಾವುದೇ ಪ್ರಸ್ತಾವನೆ ಸಲ್ಲಿಸದೇ ಗಿಮಿಕ್ ಮಾಡಲಾಯಿತು. ಶಿರಸಿ ಜಿಲ್ಲೆಯ ವಿಚಾರವೂ ಅದಂತೆ ಚುನಾವಣಾ ತಂತ್ರ ಆಗಬಾರದು. ಪ್ರತ್ಯೇಕ ಜಿಲ್ಲೆ ಮಾಡುವುದಿದ್ದರೆ ಸರ್ಕಾರಕ್ಕೆ ಸ್ಪಷ್ಟ ಪ್ರಸ್ತಾವನೆ ಸಲ್ಲಿಕೆಯಾಗಲಿ ಎಂದರು.
ಹೊಸ ಘೋಷಣೆ ಮಾಡದೇ ಅದನ್ನು ಅನುಷ್ಠಾನದತ್ತ ಗಮನ ಹರಿಸಬೇಕು. ಕೇವಲ ಹೊಸ ಯೋಜನೆ ಘೋಷಣೆ ಮಾಡಿ ಅನುಷ್ಠಾನ ಮಾಡದೇ ಜನರ ದಿಕ್ಕು ತಪ್ಪಿಸುವ ಕೆಲಸ ನಿಲ್ಲಬೇಕು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವಿಚಾರದಲ್ಲಿ ಬಿಜೆಪಿಯ ಬಣ್ಣ ಬಯಲಾಗಿದೆ ಎಂದರು.
ಈಗಾಗಲೇ ಕೆಪಿಸಿಸಿ ಸದಸ್ಯನಾಗಿ ನೇಮಕವಾಗಿದ್ದು ಒಬ್ಬರಿಗೆ ಒಂದೇ ಹುದ್ದೆ ತತ್ವಕ್ಕೆ ಬದ್ಧನಾಗಿದ್ದೇನೆ. ಈ ಕಾರಣಕ್ಕೆ ಕಾಂಗ್ರೆಸ್ ಜಿಲ್ಲಾ ವಕ್ತಾರ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.