ಯಲ್ಲಾಪುರ: ಮಂಗಳೂರಿನ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಯುವ ವಕೀಲ ಕುಲದೀಪ ಶೆಟ್ಟಿಯವರ ಮೇಲಿನ ಹಲ್ಲೆಯನ್ನು ಖಂಡಿಸಿ, ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಾಲೂಕು ವಕೀಲರ ಸಂಘದವರು ಶುಕ್ರವಾರ ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ವಕೀಲರ ಸಂಘದ ಕಾರ್ಯಾಲಯದಲ್ಲಿ ತುರ್ತು ಸಭೆ ಸೇರಿದ ವಕೀಲರು, ಮಂಗಳೂರಿನ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ಯುವ ವಕೀಲ ಕುಲದೀಪ ಶೆಟ್ಟಿಯವರೊಂದಿಗೆ ಅಮಾನುಷವಾಗಿ ವರ್ತಿಸಿ ಅವರ ಮೇಲೆ ದೌರ್ಜನ್ಯ ಎಸಗಲಾಗಿದೆ. ಅವರನ್ನು ಅವಾಚ್ಯ ಶಬ್ದದಿಂದ ನಿಂದಿಸಿ ಪ್ರಾಣಿಗಳಂತೆ ವರ್ತಿಸಲಾಗಿದೆ. ವಕೀಲರ ಸಂಘದ ಯಾವತ್ತೂ ಸದಸ್ಯರ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ. ಮಂಗಳೂರಿನ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿಯ ಘಟನೆಗೆ ಕಾರಣರಾದ ವ್ಯಕ್ತಿಗಳಿಗೆ ಕಾನೂನಿನಂತೆ ಸೂಕ್ತ ಕ್ರಮ ಜರುಗಿಸಿ ಶಿಕ್ಷೆ ವಿಧಿಸಬೇಕು ಮತ್ತು ಇನ್ನುಮುಂದೆ ರಾಜ್ಯದ ಯಾವುದೇ ವಕೀಲರೊಂದಿಗೆ ಅಗೌರವವಾಗಿ ನಡೆದುಕೊಳ್ಳದಂತೆ ಸೂಕ್ತ ರಕ್ಷಣೆ ಒದಗಿಸುವಂತೆ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ರವಾನೆ ಮಾಡಿರುವ ಮನವಿಯಲ್ಲಿ ವಿನಂತಿಸಲಾಗಿದೆ.
ತಹಶೀಲ್ದಾರ ಅನುಪಸ್ಥಿತಿಯಲ್ಲಿ ಶಿರಸ್ತೆದಾರ ಗೀತಾ ಜಾಧವ ಮನವಿ ಸ್ವೀಕರಿಸಿದರು. ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ಭಟ್, ಕಾರ್ಯದರ್ಶಿ ಎಸ್.ಜೆ.ಚವ್ವಾಣ, ಖಜಾಂಚಿ ವಿ.ಎನ್.ನಾಯ್ಕ, ಮಹಿಳಾ ಪ್ರತಿನಿಧಿ ಬೀಬಿ ಅಮೀನಾ ಶೇಖ್, ಹಿರಿಯ ವಕೀಲರುಗಳಾದ ಎನ್.ಆರ್.ಭಟ್, ಕೊಡ್ಲಗದ್ದೆ, ಜಿ.ಎಸ್.ಭಟ್, ಹಳವಳ್ಳಿ, ವಕೀಲರ ಸಂಘದ ಸದಸ್ಯರಾದ ಜಿ.ವಿ.ಭಾಗ್ವತ್, ಪಿ.ಜಿ.ಭಟ್ಟ, ವಿ.ಟಿ.ಭಟ್ಟ, ಜಿ.ಎಸ್.ಭಟ್ಟ ಕಣ್ಣಿ, ಆರ್.ಎಸ್.ಪಾಟೀಲ್, ನಾಗರಾಜ, ಸುಭಾಸ್ ಭಟ್ಟ, ಜಿ.ಜಿ.ಪಾಟಣಕರ, ಮಹೇಶ ನಾಯ್ಕ ಮುಂತಾದವರ ಮನವಿ ನೀಡುವ ಸಂದರ್ಭದಲ್ಲಿ ಇದ್ದರು.