ಯಲ್ಲಾಪುರ: ತಾಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯ ಕುರಿತು ಪೂರ್ವಭಾವಿ ಸಭೆ ಮಂಗಳವಾರ ಪಟ್ಟಣದ ಸಾಹಿತ್ಯ ಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕ.ಸಾ.ಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಮಾತನಾಡಿ, ಸಾಹಿತ್ಯ ಸಮ್ಮೇಳನವನ್ನು ಗ್ರಾಮೀಣ ಭಾಗದಲ್ಲಿ ಬರುವ ಜನವರಿ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಮ್ಮೇಳನದ ಸ್ಥಳ, ಸರ್ವಾಧ್ಯಕ್ಷರ ಆಯ್ಕೆಯ ಕುರಿತು ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನಿಸಿ, ಘೋಷಿಸಲಾಗುವುದು ಎಂದರು.
ಸಮ್ಮೇಳನದಲ್ಲಿ ಕನ್ನಡ ನಾಡು-ನುಡಿ, ತಾಲೂಕಿನ ಅಭಿವೃದ್ಧಿ, ಪ್ರವಾಸೋದ್ಯಮದ ಕುರಿತು ವಿಚಾರ ಗೋಷ್ಠಿ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ನಿರ್ಣಯಿಸಲಾಯಿತು.
ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಕ.ಸಾ.ಪ ಮಾಜಿ ಅಧ್ಯಕ್ಷ ಶ್ರೀರಂಗ ಕಟ್ಟಿ, ನಿವೃತ್ತ ತಹಶೀಲ್ದಾರ ಡಿ.ಜಿ.ಹೆಗಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ನಾಟಕಕಾರ ಟಿ.ವಿ.ಕೋಮಾರ, ಸಾಹಿತಿ ಸುಬ್ರಾಯ ಬಿದ್ರೆಮನೆ, ಕ.ಸಾ.ಪ ಜಿಲ್ಲಾ ಸಮಿತಿಯ ಸುಮಂಗಲಾ ಹನುಮರೆಡ್ಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೃಷ್ಣ ಭಟ್ಟ ನಾಯಕನಕೆರೆ, ಗಂಗಾಧರ.ಎಸ್.ಎಲ್, ಜಿ.ಎನ್.ಭಟ್ಟ ತಟ್ಟಿಗದ್ದೆ, ಶ್ರೀನಿವಾಸ ಗಾಂವ್ಕಾರ ಇತರರು ಭಾಗವಹಿಸಿದ್ದರು.
ಕಸಾಪ ಗೌರವ ಕಾರ್ಯದರ್ಶಿ ಶ್ರೀಧರ ಅಣಲಗಾರ ಸ್ವಾಗತಿಸಿದರು. ಸಂಜೀವಕುಮಾರ ಹೊಸ್ಕೇರಿ ವಂದಿಸಿದರು.