ಜೊಯಿಡಾ: ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ ಹಾಗೂ ಕಾತೇಲಿ ಗ್ರಾಮ ಪಂಚಾಯತದ ಕೆಲ ಗ್ರಾಮಗಳಿಗೆ ರಸ್ತೆ ಸಂಪರ್ಕ ಸರಿಯಿಲ್ಲದ ಕಾರಣ ಇಲ್ಲಿನ ಹಳ್ಳಿ ಜನರು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ರಸ್ತೆ ಸರಿಪಡಿಸದೇ ಇದ್ದಲ್ಲಿ ಸದಾಶಿವಗಡ- ಔರಾದ ರಸ್ತೆಯಲ್ಲಿ ಪ್ರತಿಭಟನೆ ಮಾಡುವುದಾಗಿ ತಹಶೀಲ್ದಾರ ಕಚೇರಿಗೆ ಕುಣಬಿ ಸಮಾಜದ ತಾಲೂಕಾ ಅಧ್ಯಕ್ಷ ಅಜಿತ ಮಿರಾಶಿ ಮುಂದಾಳತ್ವದಲ್ಲಿ ಮನವಿ ಸಲ್ಲಿಸಲಾಗಿದೆ.
ಬಜಾರಕುಣಂಗ ಗ್ರಾಮ ಪಂಚಾಯತ ವ್ಯಾಪ್ತಿಯ ಡಿಗ್ಗಿ, ಬೊಂಡೋಲಿ, ಮಯರೆ, ದುದಮಾಳ, ಸಿಶೈ, ಘಾಟಕುಂಣಕ ಸೇರಿದಂತೆ ಇನ್ನೂ ಬಹಳಷ್ಟು ಹಳ್ಳಿಗಳಿಗೆ ರಸ್ತೆ ಸಂಪರ್ಕ ಇಲ್ಲ. ಅಲ್ಲದೇ ಕಾತೇಲಿ ಗ್ರಾಮ ಪಂಚಾಯತ ವ್ಯಾಪ್ತಿಯ ತೇರಾಳಿ, ಪಾತಾಗುಡಿ, ಭಾಮಣೆ, ಸಿರೋಳಿ ಇನ್ನೂ ಹಲವಾರು ಗ್ರಾಮಗಳಿಗೆ ರಸ್ತೆ ಮತ್ತು ಸೇತುವೆಗಳು ಇಲ್ಲದ ಕಾರಣ ಇಲ್ಲಿನ ಜನರು ದಿನನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ಇಲ್ಲಿನ ಜನರಿಗೆ ರಸ್ತೆ, ಸೇತುವೆ ಇಲ್ಲದೆ ಬಹಳಷ್ಟು ಕಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಇನ್ನು 10 ದಿನಗಳ ಒಳಗಾಗಿ ರಸ್ತೆ ಕೆಲಸ ಪ್ರಾರಂಭ ಮಾಡದೇ ಇದ್ದಲ್ಲಿ ಸದಾಶಿವಗಡ- ಔರಾದ ಮುಖ್ಯ ರಸ್ತೆ ತಡೆದು ಪ್ರತಿಭಟನೆ ಮಾಡುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.