ಯಲ್ಲಾಪುರ: ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕು ನನ್ನ ಕಣ್ಣುಗಳಿದ್ದಂತೆ. ತಾಲೂಕಿನಲ್ಲಿ ಏನು ಅಭಿವೃದ್ಧಿ ಮಾಡಲಾಗುತ್ತದೆಯೋ ಅದೇ ಪ್ರಮಾಣದಲ್ಲಿ ತಾಲೂಕು ಅಭಿವೃದ್ಧಿ ಮಾಡುತ್ತಿದ್ದೇವೆ. ಯಾವುದರಲ್ಲಿಯೂ ಭೇದಭಾವ ಮಾಡಿಲ್ಲ. ಎರಡೂ ಊರಿನ ಬಡವರ ಅವಶ್ಯಕತೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಸಮನಾಗಿ ಆದ್ಯತೆ ನೀಡಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಸೋಮವಾರ ಪಟ್ಟಣದ ಹೆಬ್ಬಾರ್ ನಗರದಲ್ಲಿ ವಸತಿ ಇಲಾಖೆ, ಪೌರಾಡಳಿತ ಇಲಾಖೆ, ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಪಟ್ಟಣ ಪಂಚಾಯಿತಿ ಯಲ್ಲಾಪುರ ಆಶ್ರಯದಲ್ಲಿ, ಯಲ್ಲಾಪುರ ಪಟ್ಟಣ ವ್ಯಾಪ್ತಿಯ ಮಂಜುನಾಥನಗರ ಮತ್ತು ಗಣಪತಿಗಲ್ಲಿ ಬಡಾವಣೆಯ 200 ನಿವಾಸಿಗಳಿಗೆ ಹಕ್ಕುಪತ್ರ, ಬೀದಿ ಬದಿಯ ವ್ಯಾಪಾರಿಗಳಿಗೆ ಪರಿಚಯ ಫಲಕ, ಜಿ+2 ಮನೆಗಳ ವಂತಿಕೆ ಹಣ ಪತ್ರ ವಿತರಿಸಿ ಮಾತನಾಡಿದರು.
ಹೆಬ್ಬಾರ್ ನಗರ ಎಂದು ನಾವಾಗಿಯೇ ಹೆಸರಿಸಿರುವದಲ್ಲ, 10 ಎಕರೆ ಜಮೀನು ಸರ್ಕಾರದಿಂದ ಅಂಗೀಕೃತವಾಗಿ ಹೆಬ್ಬಾರ್ ನಗರವಾಗಿದೆ. ಇಲ್ಲಿ 60 ಕೋಟಿ ರೂಪಾಯಿಗೂ ಹೆಚ್ಚು ಹಣ ವೆಚ್ಚ ಮಾಡಲಾಗುತ್ತಿದೆ. ಉತ್ತಮ ರಸ್ತೆ ಚರಂಡಿ, ವಿದ್ಯುತ್ ಸೌಲಭ್ಯ, 9 ಕೋ ರೂ ವೆಚ್ಛದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತಿದೆ. ಮನೆ ನೀಡುವಾಗ ಜಾತಿ ಧರ್ಮ ನೋಡಿಲ್ಲ ಎಲ್ಲರೂ ನಮಗೆ ಒಂದೆ. ಒಟ್ಟು 600 ಕುಟುಂಬಗಳಿಗೆ ಇಲ್ಲಿ ವಸತಿ ವ್ಯವಸ್ಥೆಗಳನ್ನು ಕಲ್ಪಿಸಕೊಡಲಾಗುತ್ತಿದೆ. ಐದುವರೆ ವರ್ಷದಿಂದ ಸತತವಾಗಿ ಪ್ರಯತ್ನ ಮಾಡಿ ಈ ಜಾಗವನ್ನು ಪಡೆಯಲಾಗಿದೆ. ಪಟ್ಟಣ ಪಂಚಾಯತಿ, ಸ್ಲಂ ಬೋರ್ಡ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮನೆ ನಿರ್ಮಾಣ ಮಾಡಲು ಹಗಲು ರಾತ್ರಿ ಶ್ರಮಿಸಿದ್ದಾರೆ. ಈ ಹೆಬ್ಬಾರ್ ನಗರ ಆದರ್ಶ ನಗರ ಆಗಲಿದೆ ಎನ್ನುವ ವಿಶ್ವಾಸವಿದೆ. ಪಟ್ಟಣದಲ್ಲಿ ಭೂಮಿಯ ಬೆಲೆ ಬಹಳಷ್ಟು ಹೆಚ್ಚಾಗಿದೆ. ಹೀಗಾಗಿ ಪಟ್ಟಣದ ಬಡ ಜನತೆ ಅಪಾರ್ಟಮೆಂಟ್ ವ್ಯವಸ್ಥೆಗೆ ಬದಲಾಗುವ ಮನೋಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ.ಪಂ ಅಧ್ಯಕ್ಷೆ ಸುನಂದಾ ದಾಸ್ ಮಾತನಾಡಿ, ಶಿವರಾಮ ಹೆಬ್ಬಾರ್ ಅವರು ಶಾಸಕರಾಗಿ ಸಚಿವರಾಗಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ತಂದಿದ್ದಾರೆ. ಕಾರ್ಮಿಕ ಸಚಿವರಾಗಿ ಕಾರ್ಮಿಕ ಇಲಾಖೆ ಒಂದು ಇದೆ ಎಂದು ರಾಜ್ಯಕ್ಕೆ ತೋರಿಸಿಕೊಟ್ಟಿದ್ದಾರೆ. ಯಲ್ಲಾಪುರ ಪಟ್ಟಣದಲ್ಲಿ ಪ.ಪಂ ಕಚೇರಿ, ಬಸ್ ನಿಲ್ದಾಣ, ನೂತನ ತಹಶೀಲ್ದಾರ ಕಚೇರಿ ಆಸ್ಪತ್ರೆ ಎಲ್ಲವು ಕೂಡ ಆಧುನಿಕತೆಯ ಸ್ಪರ್ಶ ಪಡೆದಿವೆ. ಐಶ್ವರ್ಯ ಬಂದರೆ ಅಹಂಕಾರ ಬರುತ್ತದೆ ಎನ್ನುತ್ತಾರೆ. ಅಧಿಕಾರ ಇದ್ದಾಗಲೂ ಕೂಡ ಬಹಳಷ್ಟು ಸರಳತೆಯನ್ನು ಅಳವಡಿಸಿಕೊಂಡವರು ಶಿವರಾಮ ಹೆಬ್ಬಾರ್ ಎಂದು ಶ್ಲಾಘಿಸಿದರು.
ಪ.ಪಂ ಉಪಾಧ್ಯಕ್ಷೆ ಶಾಮಿಲಿ ಪಾಟಣಕರ ಸಾಂದರ್ಭಿಕವಾಗಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಅನೇಕ ಸೌಲಭ್ಯ ಒದಗಿಸಿ ಹೆಬ್ಬಾರ್ ಅವರು ರಾಜ್ಯಾದ್ಯಂತ ಮನೆ ಮಾತಾಗಿದ್ದಾರೆ ಎಂದು ಹೇಳಿದರು.
ಪ್ರಭಾವತಿ ಹೆಗಡೆ ಪ್ರಾರ್ಥಿಸಿದರು, ಸಮೂಹ ಸಂಪನ್ಮೂಲ ಅಧಿಕಾರಿ ಹೇಮಾವತಿ ಭಟ್ಟ ಸ್ವಾಗತಿಸಿದರು. ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿ ಶಂಬುಲಿ0ಗ ಪ್ರಾಸ್ತಾವಿಕಗೈದರು. ಕೇಬಲ್ ನಾಗೇಶ ನಿರೂಪಿಸಿ ವಂದಿಸಿದರು. ತಹಶೀಲ್ದಾರ ಶ್ರಿಕೃಷ್ಣ ಕಾಮ್ಕರ, ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಆಧಿತ್ಯ ಗುಡಿಗಾರ, ಉದ್ಯಮಿ ಬಾಲಕೃಷ್ಣ ನಾಯಕ, ವಿಕಾಸ ಬ್ಯಾಂಕ್ ಅಧ್ಯಕ್ಷ ಮುರುಳಿ ಹೆಗಡೆ, ಪ.ಪಂ ಮಾಜಿ ಅಧ್ಯಕ್ಷ ಶಿರೀಶ ಪ್ರಭು, ಮಂಡಳಾಧ್ಯಕ್ಷ ಜಿ.ಎನ್.ಗಾಂವ್ಕರ, ಪ.ಪಂ ಸದಸ್ಯರಾದ ಸತೀಶ ನಾಯ್ಕ, ಪ್ರಶಾಂತ ತಳವಾರ, ಕಲ್ಪನಾ ನಾಯ್ಕ ಜ್ಯೋತಿ ನಾಯ್ಡು, ಪುಷ್ಪಾ ನಾಯ್ಕ, ನಾಮ ನಿರ್ದೇಶಿತ ಸದಸ್ಯರಾದ ಕುಮುದಾ ಹಾಗೂ ನಾಗರಾಜ ಗಾಂವ್ಕರ ವೇದಿಕೆಯಲ್ಲಿದ್ದರು.