ಕಾರವಾರ: ನನ್ನ ರಾಜಕೀಯದ ಬಗ್ಗೆ ಇನ್ನೂ ಯಾವ ನಿರ್ಧಾರ ತೆಗೆದುಕೊಂಡಿಲ್ಲ. ಈಗಾಗಲೇ ಕ್ಷೇತ್ರದಲ್ಲಿ ಓಡಾಟ ನಡೆಸಿ ಕಾರ್ಯಕರ್ತರ ಜೊತೆ ಚರ್ಚೆ ನಡೆಸುತ್ತಿದ್ದು, ಇನ್ನು ಕೆಲ ದಿನದಲ್ಲಿಯೇ ಯಾವ ನಿಲುವು ತೆಗೆದುಕೊಂಡು ಘೋಷಣೆ ಮಾಡುತ್ತೇನೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಸ್ಪಷ್ಟನೆ ನೀಡಿದ್ದಾರೆ.
ಚುನಾವಣಾ ಕಣದಿಂದ ಆನಂದ್ ಹಿಂದಕ್ಕೆ ಎಂಬ ಸುದ್ದಿ ಪ್ರಕಟವಾದ ಹಿನ್ನಲೆಯಲ್ಲಿ ಸ್ಪಷ್ಟ್ಟನೆ ನೀಡಿರುವ ಅವರು, ಕ್ಷೇತ್ರದ ಅಭಿವೃದ್ದಿಗೆ ನನ್ನ ಮೊದಲ ಆದ್ಯತೆ ಇದೆ. ಅಲ್ಲದೇ ಕಳೆದ 10 ವರ್ಷದಿಂದ ಅಧಿಕಾರ ಇಲ್ಲದೇ ನನ್ನ ಕಾರ್ಯಕರ್ತರು ನೋವಿನಲ್ಲಿದ್ದು ಮುಂದೆ ನಾನು ತೆಗೆದುಕೊಳ್ಳುವ ನಿರ್ಧಾರ ಕಾರ್ಯಕರ್ತರಿಗೂ ಬೇಸರ ತರಿಸಬಾರದು. ಈ ನಿಟ್ಟಿನಲ್ಲಿ ಯೋಗ್ಯ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ನನ್ನನ್ನ ಎರಡು ಬಾರಿ ಕ್ಷೇತ್ರದಿಂದ ಕಾರ್ಯಕರ್ತರು ಗೆಲ್ಲಿಸಿ ಕಳಿಸಿದ್ದಾರೆ. ಕಳೆದ ಬಾರಿ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದು ಹಲವರು ನನಗೆ ಬೆಂಬಲಿಸಿದರೆ, ಇನ್ನು ಕಾಂಗ್ರೆಸ್ ಪಕ್ಷದ ಹಲವು ನಾಯಕರು ಬೆಂಬಲ ನೀಡದೆ ಇದ್ದ ಹಿನ್ನಲೆಯಲ್ಲಿ ಹಿನ್ನಡೆಯಾಗಿತ್ತು. ಈ ಬಾರಿ ಲೋಕಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕಾ, ಅಥವಾ ವಿಧಾನಸಭೆಗೆ ನಿಲ್ಲಬೇಕಾ ಎನ್ನುವ ಕುರಿತು ಕಾರ್ಯಕರ್ತರ ಜೊತೆ ಚರ್ಚಿಸಲಾಗುತ್ತಿದೆ. ಕಾರ್ಯಕರ್ತರು ಹೇಳಿದಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಹಾಲಿ ಮತ್ತು ಮಾಜಿ ಶಾಸಕರು ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡಿಕೊಂಡು ಕಿತ್ತಾಟದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಚುನಾವಣೆಗೆ ಇನ್ನು ನಾಲ್ಕು ತಿಂಗಳಿದ್ದು ಹಾಲಿ ಶಾಸಕರು ಒಂದಾದರು ದೊಡ್ಡ ಯೋಜನೆಯನ್ನು ತರಲಿ. ಕ್ಷೇತ್ರಕ್ಕೆ ಅಗತ್ಯವಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ಹಾಕಲಿ. ಅದನ್ನ ಬಿಟ್ಟು ಗುದ್ದಲಿ ಪೂಜೆ ಮಾಡುತ್ತಾ ಹೋದರೆ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.
ನನ್ನ ಅವಧಿಯಲ್ಲಿ ಮೆಡಿಕಲ್ ಕಾಲೇಜು, ಇಂಜಿನಿಯರಿ0ಗ್ ಕಾಲೇಜು, ಹಾಲಕ್ಕಿ ಸಮುದಾಯವನ್ನ ಪರಿಶಿಷ್ಟ ಪಂಗಡಕ್ಕೆ ಸೇರುವ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸುವ ಕಾರ್ಯ ಮಾಡಲಾಗಿತ್ತು. ಇಂದಿಗೂ ಈ ಎಲ್ಲಾ ಯೋಜನೆ ಜನರು ನೆನಪಿಸಿಕೊಳ್ಳುತ್ತಿದ್ದಾರೆ. ದೊಡ್ಡ ಯೋಜನೆ ತಂದರೆ ಜನರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದಿದ್ದಾರೆ.
ಕ್ಷೇತ್ರದಲ್ಲಿ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಮುಂದೆ ಅವರಿಗೆ ಈ ಸಮಸ್ಯೆ ಎದುರಾಗಬಾರದು ಎಲ್ಲರಿಗೂ ಕೆಲಸ ಸಿಕ್ಕಿ ಉದ್ಯೋಗ ಸೃಷ್ಟಿಯಾಗಲಿ ಎನ್ನುವುದು ನನ್ನ ನಿಲುವಾಗಿದೆ. ಯಾರಿಗೂ ಬೆಂಬಲ ಕೊಡಬೇಕೋ, ಅಥವಾ ಚುನಾವಣಾ ಕಣದಿಂದ ಹಿಂದೆ ಸರಿಯಬೇಕೋ ಎನ್ನುವುದು ಯಾವುದು ಇನ್ನೂ ಚರ್ಚಿಸಿಲ್ಲ. ಏನೇ ನಿರ್ಧಾರ ತೆಗೆದುಕೊಂಡರು ಕ್ಷೇತ್ರಕ್ಕೆ ಒಳಿತಾಗುವ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಆನಂದ್ ಅಸ್ನೋಟಿಕರ್ ತಿಳಿಸಿದ್ದಾರೆ.