ಶಿರಸಿ: ಪಕ್ಷದ ಕಚೇರಿಯೇ ಇಲ್ಲ, ಪಕ್ಷವನ್ನ ಹೇಗೆ ಸಂಘಟನೆ ಮಾಡಲು ಸಾಧ್ಯ ಎಂದು ಕಾರವಾರದ ಕಾಂಗ್ರೆಸ್ ಕಾರ್ಯಕರ್ತರು ನಾಯಕರುಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆದಿದೆ.
ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಕೈ ಬಿಟ್ಟಿರುವ ಕುರಿತು ಚರ್ಚೆ ನಡೆಸುವ ನಿಟ್ಟಿನಲ್ಲಿ ಶಿರಸಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಉಸ್ತುವಾರಿ ಐವಾನ್ ಡಿಸೋಜಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ಸಭೆಯಲ್ಲಿ ಕರೆಯಲಾಗಿತ್ತು. ಸಭೆಯಲ್ಲಿ ಜಿಲ್ಲೆಯಲ್ಲಿ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಇನ್ನು ಕಾರವಾರ ಕ್ಷೇತ್ರದ ಬಗ್ಗೆ ಚರ್ಚೆಗೆ ಬಂದ ಸಂದರ್ಭದಲ್ಲಿ ಕಾರ್ಯಕರ್ತರು ಪಕ್ಷ ಸಂಘಟನೆ ಹಿಂದೆ ಇರುವ ಕುರಿತು ಅಸಮಾಧಾನವನ್ನ ನಾಯಕರ ಮುಂದೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಾರವಾರದಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿಯೇ ಇಲ್ಲ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸರಿಯಾಗಿ ಸಭೆ ನಡೆಸುತ್ತಿಲ್ಲ. ಕಾರ್ಯಕರ್ತರು ಒಂದೆಡೆ ಸಂಘಟನೆಯಾಗಲು ಕಚೇರಿಯೇ ಇಲ್ಲದಿದ್ದಾಗ ಹೇಗೆ ಎನ್ನುವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಚುನಾವಣೆ ವೇಳೆ ಕಾಂಗ್ರೆಸ್ ಕಚೇರಿ ಕ್ಷೇತ್ರದಲ್ಲಿತ್ತು. ಅದಾದ ನಂತರ ಪಕ್ಷದ ಕಚೇರಿಯೇ ಇಲ್ಲವಾಗಿದೆ. ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಮಾತ್ರ ಬಾಕಿ ಉಳಿದಿದ್ದು ಕಾರ್ಯಕರ್ತರು ಸಂಘಟನೆ ಬಲಪಡಿಸಬೇಕಾದರೆ ಕಚೇರಿ ಬೇಕಾಗಿದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸರಿಯಾಗಿ ಕೆಲಸ ಮಾಡಬೇಕಾಗುತ್ತದೆ. ಇದಕ್ಕೆ ಜಿಲ್ಲಾ ಕಾಂಗ್ರೆಸ್ ನಿಂದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ನಾಯಕರುಗಳು ಪ್ರತಿಕ್ರಿಯಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದು, ಪಕ್ಷದ ಕಚೇರಿ ಪ್ರಾರಂಭದ ಬಗ್ಗೆ ಸೂಚಿಸಲಾಗುವುದು. ಕ್ಷೇತ್ರದಲ್ಲಿ ಈ ಬಾರಿ ಗೆಲ್ಲಲು ಅವಕಾಶವಿದ್ದು ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಸಿಲುಕದೇ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಜಿಲ್ಲೆಯಲ್ಲೂ ಮತದಾರರ ಹೆಸರು ನಾಪತ್ತೆ!!
ಜಿಲ್ಲೆಯಲ್ಲೂ ಸಾವಿರಾರು ಮತದಾರರ ಹೆಸರು ನಾಪತ್ತೆಯಾಗಿರುವ ಕುರಿತು ಬುಧವರಾ ಕಾಂಗ್ರೆಸ್ ಕಚೇರಿಯಲ್ಲಿ ಚರ್ಚೆ ನಡೆಸಲಾಯಿತು ಎನ್ನಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಹೆಸರು ನಾಪತ್ತೆಯಾದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಂಗ್ರೆಸ್ ರಾಜ್ಯದಲ್ಲಿ ಮತದಾರರ ಹೆಸರು ಕೈ ಬಿಟ್ಟ ಕುರಿತು ಪರಿಶೀಲನೆಗೆ ಮುಂದಾಗಿದೆ.
ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರೇ ಖುದ್ದಾಗಿ ಪ್ರತಿ ಕ್ಷೇತ್ರದಲ್ಲಿ ನಾಪತ್ತೆಯಾಗಿರುವ ಮತದಾರರ ಸಂಖ್ಯೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ನೀಡಿದ್ದು ಈ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಪರಿಶೀಲಿಸಲು ಸೂಚಿಸಲಾಗಿದೆ ಎನ್ನಲಾಗಿದೆ. ಕಾರವಾರ ಕ್ಷೇತ್ರ ಒಂದರಲ್ಲಿಯೇ ಸಾವಿರಾರು ಹೆಸರುಗಳು ನಾಪತ್ತೆಯಾಗಿದೆ ಎನ್ನಲಾಗಿದ್ದು ಈ ಬಗ್ಗೆ ಮೂರು ದಿನದಲ್ಲಿ ಪರಿಶೀಲಿಸಿ ವರದಿ ನೀಡುವಂತೆ ಕಾಂಗ್ರೆಸ್ ಸ್ಥಳೀಯ ನಾಯಕರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಇದಲ್ಲದೇ ಪ್ರತಿ ಮತದಾರ ತನ್ನ ಹೆಸರು ಪಟ್ಟಿಯಲ್ಲಿ ಇದೆಯೇ ಎನ್ನುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಸಹ ಮಾಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.