ಶಿರಸಿ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ರಾಜ್ಯಶಾಸ್ತ್ರ ವಿಭಾಗ, ಎನ್ಎಸ್ಎಸ್ ಘಟಕ, ರೋವರ್ಸ್ & ರೇಂಜರ್ಸ್ ಘಟಕದ ವತಿಯಿಂದ ಸಂವಿಧಾನ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸತೀಶ ಎನ್.ನಾಯ್ಕ ವಿದ್ಯಾರ್ಥಿಗಳಿಗೆ ಸಂವಿಧಾನದ ರಚನೆ, ಪೂರ್ವ ಪೀಠಿಕೆ, ಮಹತ್ವ ಕುರಿತಾಗಿ ಉಪನ್ಯಾಸ ನೀಡಿದರು. 5000 ವರ್ಷಗಳಿಗೂ ಮೀರಿದ ಸಂಸ್ಕೃತಿಯ ಹಿನ್ನಲೆಯನ್ನು ಹೊಂದಿರುವ ಭಾರತ 6452 ಜಾತಿಗಳು, 6 ಮತ, 52 ಬುಡಕಟ್ಟು ಜನಾಂಗವನ್ನು ಒಳಗೊಂಡಿದ್ದರೂ, ಸಂವಿಧಾನದ ಶ್ರೇಷ್ಠತೆಯನ್ನು ಕಾಣಬಹುದು. 1618 ಭಾಷೆಗಳನ್ನು ಮಾತಾಡುವ ವೈವಿಧ್ಯತೆ ಯಾವ ರಾಷ್ಟ್ರದಲ್ಲಿಯೂ ಕಾಣಲು ಸಿಗುವುದಿಲ್ಲ. ವೈವಿಧ್ಯಮಯವಾದ ದೇಶದ ನಡುವೆಯೂ ಏಕತೆಯನ್ನು ಸಾಧಿಸಿ ಭ್ರಾತೃತ್ವ ಭಾವನೆಯನ್ನು ಮೂಡಿಸುತ್ತಾ, ಪ್ರಜಾ ಕಲ್ಯಾಣವನ್ನು ಬಯಸುವ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿ ಹೊರ ಹೊರಹೊಮ್ಮಲು ನಮ್ಮ ರಾಷ್ಟ್ರದ ಸಂವಿಧಾನದ ಅಡಿಪಾಯ ಕಾರಣವಾಗಿದೆ. ಆ ಶ್ರೇಯಸ್ಸು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ದಾಕ್ಷಾಯಣಿ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂವಿಧಾನ ಸ್ವಾತಂತ್ರ, ಸಮಾನತೆ, ಭಾವೈಕ್ಯತೆಗೆ ಹೆಚ್ಚಿನ ಮಹತ್ವ ಕೊಟ್ಟಿದೆ. ಜಗತ್ತಿನ ಅತಿದೊಡ್ಡ ಸಂವಿಧಾನವನ್ನು ಹೊಂದಿರುವ ಭಾರತದ ಪ್ರಜಾಪ್ರಭುತ್ವ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಭಾರತ ಸಂವಿಧಾನದ ಶ್ರೇಷ್ಠತೆಯನ್ನು, ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಂವಿಧಾನ ದಿನಾಚರಣೆಯ ಸಾರ್ಥಕತೆ ಹೊಂದಲು ಸಾಧ್ಯ ಎಂದರು.
ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ಡಾ.ವಸಂತ ಎಸ್.ನಾಯ್ಕ ವಿದ್ಯಾರ್ಥಿಗಳಿಗೆ ಸಂವಿಧಾನದ ಪೂರ್ವ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಐಕ್ಯೂಎಸಿ ಸಂಚಾಲಕ ವಿಶ್ವಲಿಂಗ ಪ್ರಸಾದ ಬಿ. ಸ್ವಾಗತಿಸಿದರು. ಸಿಂಧು ಚೌಧರಿ ಪ್ರಾರ್ಥಿಸಿದರು. ಡಾ.ವಸಂತ ಎಸ್. ನಾಯ್ಕ ನಿರ್ವಹಿಸಿದರು. ರಾಘವೇಂದ್ರ ಶೆಟ್ಟಿ ವಂದಿಸಿದರು. ಉಪನ್ಯಾಸಕ ಸುವರ್ಣಾ ಕರಜಗಿ, ರುಬೀನಾ ಶೇಖ್, ಉಪನ್ಯಾಸಕರಾದ ಮಂಜುಳಾ ಆಚಾರಿ, ಉಮಾ ಗೌಡ ಇದ್ದರು.