ಸಿದ್ದಾಪುರ: ಇಂದಿನ ಕಾಲದಲ್ಲಿ ನಾಟಕ ತಂಡ, ಯಕ್ಷಗಾನ ಮೇಳಗಳನ್ನು ಕಟ್ಟಿ ಮುನ್ನಡೆಸುವುದು ಸವಾಲಿನ ಕೆಲಸವಾಗಿದೆ. ಯಕ್ಷಗಾನ, ನಾಟಕಗಳು ಉಳಿದಾಗ ಮಾತ್ರ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಲು ಸಾಧ್ಯ. ಅದಕ್ಕೆ ಅಂತಹ ಕಲಾ ತಂಡಗಳಿಗೆ ನಮ್ಮೆಲ್ಲರ ಸಹಕಾರ ಅಗತ್ಯ ಎಂದು ಟಿ.ಎಸ್.ಎಸ್ ನಿರ್ದೇಶಕ ರಾಮಕೃಷ್ಣ ಹೆಗಡೆ ಅಳಗೋಡು ಹೇಳಿದರು.
ಅವರು ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ ರಂಗಸೌಗಂಧ ಏರ್ಪಡಿಸಿದ್ದ ಧರ್ಮ ಸಾಮ್ರಾಜ್ಯ ನಾಟಕದ ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸ್ವಸ್ತಿಕ್ ಟ್ರೇಡರ್ಸ್ ಮಾಲೀಕ ರಾಮಚಂದ್ರ ಭಟ್ಟ ಕಲ್ಲಾಳ, ಯಾವುದೇ ಪ್ರದರ್ಶನ ಚೆನ್ನಾಗಿ ಮೂಡಿಬರಬೇಕೆಂದರೆ ನಿರ್ದೇಶಕನ ಪಾತ್ರ ಬಹಳ ಮುಖ್ಯ. ಉತ್ತಮ ನಿರ್ದೇಶಕರಿಂದ ಮಾತ್ರ ಕಲಾವಿದರಲ್ಲಿರುವ ಕಲೆ ಬೆಳಗಲು ಸಾಧ್ಯ ಎಂದರು.
ದೇವಾಲಯದ ಅಧ್ಯಕ್ಷರಾದ ಶ್ರೀಕಾಂತ ಹೆಗಡೆ ಗುಂಜಗೋಡು ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ನಂತರ ರಂಗಸೌಗಂಧ ತಂಡದವರಿಂದ ದಿ.ಸೀತಾರಾಮ ಶಾಸ್ತ್ರಿ ಹುಲಿಮನೆ ರಚನೆಯ ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದ ಧರ್ಮ ಸಾಮ್ರಾಜ್ಯ ನಾಟಕ ಪ್ರದರ್ಶನಗೊಂಡಿತು. ಸಂಗೀತದಲ್ಲಿ ರಾಜೇಂದ್ರ ಕೊಳಗಿ, ಜಯರಾಮ ಭಟ್ಟ ಹೆಗ್ಗಾರಳ್ಳಿ, ಶುಭಾ ರಮೇಶ, ಭೂಮಿಕಾ ಹೆಗಡೆ ಹೊಸಗದ್ದೆ ಸಹಕರಿಸಿದರು.
ಗಣಪತಿ ಹೆಗಡೆ ಗುಂಜಗೋಡು, ರಾಜಾರಾಮ ಭಟ್ಟ ಹೆಗ್ಗಾರಳ್ಳಿ, ರಾಮ ಅಂಕೋಲೇಕರ, ನಾಗಪತಿ ಭಟ್ಟ ವಡ್ಡಿನಗದ್ದೆ, ಶ್ರೀಪಾದ ಹೆಗಡೆ ಕೋಡನಮನೆ, ಅಜಿತ ಭಟ್ಟ ಹೆಗ್ಗಾರಳ್ಳಿ, ಜನಾರ್ಧನ ಭಟ್ಟ ಗೋಕರ್ಣ, ನಂದನ ನಾಯ್ಕ ಅರಶಿನಗೋಡ, ಪ್ರವೀಣಾ ಹೆಗಡೆ ಗುಂಜಗೋಡು, ಜಯಶ್ರೀ ಹೆಗಡೆ ವಡ್ಡಿನಗದ್ದೆ ವಿವಿಧ ಪಾತ್ರ ನಿರ್ವಹಿಸಿ ಮೆಚ್ಚುಗೆ ಗಳಿಸಿದರು.