ಕಾರವಾರ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೇವಲ ಜಾಗ ಹುಡುಕುವುದು, ಭೂಮಿಪೂಜೆ ಮಾಡಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಸೀಮಿತವಾಗದೆ, ತಜ್ಞ ವೈದ್ಯರನ್ನು ತರುವ ಕೆಲಸ ಮೊದಲಾಗಲಿ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದು ಶತಃಸಿದ್ಧ ಎಂದಮೇಲೆ ಹೊಸ ಆಸ್ಪತ್ರೆ ನಿರ್ಮಾಣವಾಗುವವರೆಗೂ ಕಾರವಾರದಲ್ಲಿರುವ ಕ್ರಿಮ್ಸ್ ಆಸ್ಪತ್ರೆಗೆ ತಜ್ಞ ವೈದ್ಯರನ್ನು ನೇಮಕ ಮಾಡಿ. ಸೂಪರ್ ಸ್ಪೆಷಾಲಿಟಿ ನಿರ್ಮಾಣವಾದ ಬಳಿಕ ಈ ವೈದ್ಯರುಗಳನ್ನು ಅಲ್ಲಿಗೆ ನಿಯೋಜಿಸಿ. ಆದರೆ ಮೂರ್ತಿಯೇ ಇಲ್ಲದೆ ಗುಡಿ ಕಟ್ಟಿ ಏನು ಪ್ರಯೋಜನ? ಕ್ರಿಮ್ಸ್ ನಲ್ಲೂ ಕಟ್ಟಡ, ಇನ್ನಿತರ ಸೌಲಭ್ಯಗಳೆಲ್ಲವೂ ಇದೆ. ಆದರೆ ತಜ್ಞ ವೈದ್ಯರಿಲ್ಲದೆ ಸೊರಗುತ್ತಿರುವುದನ್ನು ನಾವು ಈಗಾಗಲೇ ಕಾಣುತ್ತಿದ್ದೇವೆ. ಇದೇ ಪರಿಸ್ಥಿತಿ ಮತ್ತೆ ಹೊಸ ಆಸ್ಪತ್ರೆಗೆ ಬರುವುದು ಬೇಡ. ಕೇವಲ ಶಂಕುಸ್ಥಾಪನೆ, ಭೂಮಿಪೂಜೆ, ಯಂತ್ರೋಪಕರಣ ಖರೀದಿಸಿ ಕಾಟಾಚಾರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡ ಎಂದಿದ್ದಾರೆ.
ಕ್ರಿಮ್ಸ್ ನಲ್ಲಿದ್ದ ಅನೇಕ ನುರಿತ ವೈದ್ಯರು ಬಿಟ್ಟು ಹೋಗಿದ್ದಾರೆ. ಇಲ್ಲಿಗೆ ಬರುವ ವೈದ್ಯರುಗಳಿಗೆ ಮಾಜಿ- ಹಾಲಿ ಶಾಸಕರುಗಳ ಹಿಂಬಾಲಕರು ತೊಂದರೆ ಕೊಡುತ್ತಾರೆ. ಮಂಗಳೂರು, ಮಣಿಪಾಲ್ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳಿಗೆ ರೆಫರಲ್ ಕೊಡಿ ಎಂದು ಕ್ರಿಮ್ಸ್ ವೈದ್ಯರುಗಳಿಗೆ ಬೆನ್ನುಬೀಳುತ್ತಾರೆ. ಅಗತ್ಯವಿದ್ದವರಿಗೆ ಕೇಳುವುದರಲ್ಲಿ ಹಾಗೂ ಕೊಡುವುದರಲ್ಲಿ ತಪ್ಪಿಲ್ಲ. ಆದರೆ ಕ್ರಿಮ್ಸ್ನಲ್ಲಿ ಚಿಕಿತ್ಸೆ ಲಭ್ಯವಿರುವಂಥ ವ್ಯವಸ್ಥೆ ಇದ್ದಾಗಲೂ ರೆಫರಲ್ ಕೊಡಿ ಎಂದು ಒತ್ತಾಯಿಸುವುದು, ಮುಂದೆ ನಮ್ಮದೇ ಸರ್ಕಾರ ಬರುವುದು ಎಂದು ಮಾಜಿ ಶಾಸಕರ ಹಿಂಬಾಲಕರು ವೈದ್ಯರುಗಳೊಂದಿಗೆ ದರ್ಪ ತೋರಿಸುವುದು ಸರಿಯಲ್ಲ. ಕ್ರಿಮ್ಸ್ ನಲ್ಲಿ ಲಭ್ಯವಿರುವ ಸೇವೆಗಳ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.