ದಾಂಡೇಲಿ: ಪಾದಾಚಾರಿ ಮಹಿಳೆಯೋರ್ವರ ಕುತ್ತಿಗೆಯಿಂದ ಬಂಗಾರ ಕರಿಮಣಿಯನ್ನು ಎಳೆದೊಯ್ದ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆಪಾದಿತರಿಗೆ ಸಿವಿಲ್ ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ ಹಾಗೂ ರೂ.2000 ದಂಡ ವಿಧಿಸಿದೆ.
ನಗರದ 14ನೇ ಬ್ಲಾಕ್ ಮತ್ತು ವನಶ್ರೀ ನಗರದ ರಸ್ತೆಯಲ್ಲಿ 2009ರ ಸೆ.01ರಂದು ಸ್ಥಳೀಯರಾದ ರೇಖಾ ನಾಯ್ಕ ಎಂಬುವವರು ತಮ್ಮ ಮಕ್ಕಳೊಂದಿಗೆ ನಡೆದುಕೊಂಡು ಬರುತ್ತಿರುವಾಗ ಗಾಂಧಿನಗರದ ದೀಪಕ್ ಗಾಗಡೆ ಮತ್ತು ಗುಜರಾತಿನ ಅಹ್ಮದಾಬಾದ್‌ನಲ್ಲಿರುವ ಕುಬೇರನಗರದ ನಿವಾಸಿ ಲಕ್ಷ್ಮಣ್ ಎಂಬ ಇಬ್ಬರು ಎಂ 80ಯಲ್ಲಿ ಬಂದು ಬಂಗಾರದ ಕರಿಮಣಿಯನ್ನು ಎಳೆದೊಯ್ದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕ್ಷಿ ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ರೋಹಿಣ ಡಿ. ಬಸಾಪುರ ಅವರು ಆರೋಪಿತರಿಗೆ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದ್ದಾರೆ. ಅಂದಿನ ಪೊಲೀಸ್ ವೃತ್ತ ನಿರೀಕ್ಷಕ ಪಿ.ಟಿ.ಥೋರಾಟ್ ಅವರು ತನಿಖೆ ನಡೆಸಿ ಆರೋಪಿತರ ಮೇಲೆ ಅಂತಿಮ ದೋಷರೋಪಣ ಪತ್ರವನ್ನು ಸಲ್ಲಿಸಿದ್ದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ವಕೀಲರಾದ ಹುಸೇನಸಾಬ್ ಎಂ.ನದಾಫ್ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಸಹಾಯಕ ಸರಕಾರಿ ವಕೀಲರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.