ಭಟ್ಕಳ: ಕನ್ನಡ ಸಾಹಿತ್ಯದಲ್ಲಿ ಮನುಷ್ಯ ಪ್ರೀತಿಯ ಸೆಲೆಯಿದೆ ಎಂದು ಸಾಹಿತಿ, ಉಪನ್ಯಾಸಕ ಪ್ರೊ.ಆರ್.ಎಸ್.ನಾಯಕ ನುಡಿದರು.
ಅವರು ಇಲ್ಲಿನದಿ ನ್ಯೂ ಇಂಗ್ಲೀಷ್ ಪ.ಪೂ.ಕಾಲೇಜಿನಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ರಾಷ್ಟ್ರೀಯ ಏಕತಾ ಸಪ್ತಾಹದ ಸಾಂಸ್ಕೃತಿಕ ಏಕತಾ ದಿನದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಆದಿಕವಿ ಪಂಪನಿ0ದ ಹಿಡಿದು ವಚನ ಸಾಹಿತ್ಯದ ಬಸವಣ್ಣ, ಸರ್ವಜ್ಞ, ದಾಸ ಸಾಹಿತ್ಯದಲ್ಲಿ ಕನಕ ಪುರಂದರರು ಆಧುನಿಕ ಘಟ್ಟದ ಕುವೆಂಪುರವರ ವರೆಗೆ ಎಲ್ಲರೂ ಮಾನವತೆಯ ಸಂದೇಶ ನೀಡಿದ್ದಾರೆ. ಜಾತಿ, ಧರ್ಮಗಳನ್ನು ಮೀರಿ ನಾವು ಸಾಮರಸ್ಯದಿಮದ ಬದುಕಬೇಕೆಂದು ಸಾರಿದ್ದಾರೆ ಎಂದು ನುಡಿದರಲ್ಲದೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಸಾಹಿತ್ಯ ಪರಿಷತ್ತು ಔಚಿತ್ಯಪೂರ್ಣವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅಭಿನಂದನಾರ್ಹ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಸಾಪ ಆಜೀವ ಸದಸ್ಯ, ಸದ್ಭಾವನಾ ಮಂಚ್ನ ಅಧ್ಯಕ್ಷ ಸತೀಶಕುಮಾರ ನಾಯ್ಕ ಮಾತನಾಡಿ ಭಾರತವು ವಿವಿಧ ಧರ್ಮಗಳ ಜನರನ್ನೊಳಗೊಂಡ ಸಾಮರಸ್ಯಕ್ಕೆ ಹೆಸರಾದ ದೇಶ. ಅನೇಕ ವಿಷಯಗಳಲ್ಲಿ ನಮ್ಮ ನಡುವೆ ವ್ಯತ್ಯಾಸಗಳಿದ್ದರೂ ಅಪನಂಬಿಕೆಗಳನ್ನು ನೀಗಿಕೊಂಡು ಪರಸ್ಪರ ವಿಶ್ವಾಸದಿಂದ ಬದುಕಬೇಕು ಎಂದರು. ಕ್ಷೇತ್ರಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕ ಸುರೇಶ ಮುರ್ಡೇಶ್ವರ ನಿರೂಪಿಸಿ ವಂದಿಸಿದರು.ಕಾರ್ಯಕ್ರಮದಲ್ಲಿ ಪ್ರಾಥಮಿಕ, ಪ್ರೌಢಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕರು ಉಪಸ್ಥಿತರಿದ್ದರು.