ಭಟ್ಕಳ: ರಾಷ್ಟ್ರೀಯ ಏಕತಾ ಸಪ್ತಾಹ- ಭಾಷಾ ಸೌಹಾರ್ದತಾ ದಿನದ ಅಂಗವಾಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಬಹುಭಾಷಾ ಕವಿಗೋಷ್ಠಿ ಇಲ್ಲಿನ ನ್ಯೂ ಇಂಗ್ಲೀಷ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಉದ್ಘಾಟಿಸಿ, ಭಾರತದೇಶ ಬಹುಭಾಷೆಗಳ ಬಹುಸಂಸ್ಕೃತಿಯ ನಾಡು. ನಾವು ನಮ್ಮ ಮಾತ್ರಭಾಷೆಯನ್ನು ಗೌರವಿಸುವಂತೆ ಎಲ್ಲ ಭಾಷೆಗಳನ್ನು ಗೌರವಿಸುತ್ತ ಭಾಷಾ ಸಾಮರಸ್ಯದೊಂದಿಗೆ ಬದುಕಬೇಕು ಎಂದು ನುಡಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಝಮೀರುಲ್ಲ ಷರೀಫ್ ಮಾತನಾಡಿ, ಎಲ್ಲಾ ಭಾಷೆಯ ಸಾಹಿತ್ಯವು ಮನುಷ್ಯತ್ವವನ್ನೇ ಎತ್ತಿಹಿಡಿಯುತ್ತದೆ. ಕನ್ನಡದ ಆದಿಕವಿ ಪಂಪನಿ0ದ ಹಿಡಿದು ಇಂದಿನವರೆಗಿನ ಸಾಹಿತ್ಯ ಗಮನಿಸಿದಾಗ ಎಲ್ಲರೂ ಜಾತಿ ಧರ್ಮ ಮತಗಳ ಗಡಿಯನ್ನು ಮೀರಿ ಮನುಷ್ಯ ಪ್ರೀತಿಯನ್ನೇ ಸಾರುವ ಸಂದೇಶವನ್ನು ನೀಡಿವೆ ಎಂದು ಹೇಳಿ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಿರುವುದನ್ನು ಶ್ಲಾಘಿಸಿದರಲ್ಲದೇ ತಮ್ಮ ಶಾಮಿಯಾನ ಕವಿತೆಯನ್ನು ವಾಚಿಸಿದರು.
ಆಶಯ ನುಡಿಗಳನ್ನಾಡಿ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ, ಭಾಷೆ ನಮಗೆ ಗಡಿಯಾಗಬಾರದು, ಪರಸ್ಪರರನ್ನು ಬೆಸೆಯುವ ಸಾಧನವಾಗಬೇಕು ಎಂದು ನುಡಿದರು. ಕಾರ್ಯಕ್ರಮದಲ್ಲಿ ಮಾನಾಸುತ ಶಂಭು ಹೆಗಡೆ, ನಾರಾಯಣ ಯಾಜಿ, ಸುರೇಶ ಮುರ್ಡೇಶ್ವರ, ರಜಾ ಮಾನ್ವಿ ಕನ್ನಡ ಕವಿತೆ ವಾಚಿಸಿದರೆ, ಶ್ರೀಧರ ಶೇಟ್ ಶೀರಾಲಿ ಕೊಂಕಣಿ ಕವಿತೆ, ಸಯ್ಯದ್ ಸಮೀಯುಲ್ಲ ಬರ್ಮಾವರ ನವಾಯತಿ ಕವಿತೆ, ಇಬ್ನ ಹಸನ್ ಭಟ್ಕಳಿ ಉರ್ದು ಕವಿತೆ, ಡಾ.ಕೆ.ಸಿ.ನಜೀರ ಅಹ್ಮದ್ ಹಿಂದಿ ಕವಿತೆ ವಾಚಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ನ್ಯೂ ಇಂಗ್ಲಿಷ ಪ.ಪೂ.ಕಾಲೇಜಿನ ಪ್ರಾಂಶೂಪಾಲ ವೀರೇಂದ್ರ ಶಾನಬಾಗ ಉಪಸ್ಥಿತರಿದ್ದರು. ಕಸಾಪ ಕೋಶಾಧ್ಯಕ್ಷ ಶ್ರೀಧರ ಶೇಟ್ ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕ ಸುರೇಶ ಮುರ್ಡೇಶ್ವರ ನಿರೂಪಿಸಿ ವಂದಿಸಿದರು. ನ್ಯೂ ಇಂಗ್ಲಿಷ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ, ಪ್ರೌಢಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕರು ಉಪಸ್ಥಿತರಿದ್ದರು.