ಜೊಯಿಡಾ: ತಾಲೂಕಿನ ಗಣೇಶಗುಡಿಯಲ್ಲಿ ನಡೆಯುವ ರ್ಯಾಫ್ಟಿಂಗ್ಗೆ (ಜಲಸಾಹಸ ಕ್ರೀಡೆ) ದಾಂಡೇಲಿ ಎಂಬ ಹೆಸರು ನೀಡುತ್ತಿದ್ದು, ಈ ಬಗ್ಗೆ ತಾಲೂಕಿನ ಜನತೆ ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಗಣೇಶಗುಡಿಯಲ್ಲಿ ನಡೆಯುವ ರ್ಯಾಫ್ಟಿಂಗ್ಗೆ ದಾಂಡೇಲಿಯಲ್ಲಿ ನಡೆಯುವ ರ್ಯಾಫ್ಟಿಂಗ್ ಎಂದು ಕರೆಯಲಾಗುತ್ತಿದ್ದು, ಕೆಲ ವೆಬ್ಸೈಟ್ಗಳಲ್ಲಿ ಮತ್ತು ಯುಟ್ಯೂಬ್ ಚಾನೆಲ್ಗಳಲ್ಲಿ ಹಾಗೂ ದಾಂಡೇಲಿಯಲ್ಲಿರುವ ಕೆಲ ಏಜೆಂಟ್ಗಳು ಕೂಡ ಜೊಯಿಡಾ ಹೆಸರನ್ನು ಬಳಸದೇ, ದಾಂಡೇಲಿ ರ್ಯಾಫ್ಟಿಂಗ್ ಎಂದು ಬಿಂಬಿಸುತ್ತಿದ್ದಾರೆ. ಅಲ್ಲದೇ ತಾಲೂಕಿನಲ್ಲಿರುವ ಕೆಲ ಹೋಮ್ ಸ್ಟೇನವರು ದಾಂಡೇಲಿ ಎಂದು ಬೋರ್ಡ್ ಹಾಕಿಕೊಂಡಿದ್ದು, ತಾಲೂಕಿನಲ್ಲಿದ್ದುಕೊಂಡು ಹಣ ಮಾಡಿಕೊಂಡು ಜೊಯಿಡಾ ತಾಲೂಕಿನ ಹೆಸರನ್ನೇ ಮಾಯ ಮಾಡುತ್ತಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಬಗ್ಗೆ ತಾಲೂಕಾ ಆಡಳಿತ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ತಾಲೂಕಿನ ಹೆಸರನ್ನು ಉಳಿಸುವ ಕೆಲಸ ಮಾಡಬೇಕಿದೆ. ಜೊಯಿಡಾ ಹಿಂದುಳಿದ ತಾಲೂಕಾಗಿದ್ದು, ಇಲ್ಲಿ ಉತ್ತಮವಾದ ಪರಿಸರವಿದೆ. ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರ ದಂಡೇ ಬರುತ್ತದೆ. ಆದರೆ ಬಂದ ಪ್ರತಿಯೊಬ್ಬ ಪ್ರವಾಸಿಗರು ಜೊಯಿಡಾಕ್ಕೆ ಬಂದು ಇಲ್ಲಿ ರ್ಯಾಫ್ಟಿಂಗ್ ನಡೆಸಿ, ಇಲ್ಲಿಯ ಹೋಮ್ ಸ್ಟೇ, ರೆಸಾರ್ಟ್ಗಳಲ್ಲಿ ಉಳಿದು ದಾಂಡೇಲಿ ರ್ಯಾಫ್ಟಿಂಗ್ ಎಂದು ಪ್ರಚುರಪಡಿಸುತ್ತಿದ್ದಾರೆ. ಈ ವ್ಯವಸ್ಥೆ ಸರಿಪಡಿಸಬೇಕು ಎಂಬುದು ತಾಲೂಕಿನ ಜನರ ಆಗ್ರಹವಾಗಿದ್ದ್ದು, ತಾಲೂಕನ್ನು ಬಳಸಿಕೊಂಡು, ತಾಲೂಕಿನ ಹೆಸರು ಹೇಳಲು ಹಿಂದೇಟು ಹಾಕುವ ಇಲ್ಲಿಯ ಪ್ರವಾಸೋದ್ಯಮಿಗಳಿಗೆ ತಾಲೂಕಾ ಆಡಳಿತ ಮತ್ತು ಅಧಿಕಾರಿಗಳು ಎಚ್ಚರಿಕೆ ನೀಡಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಎಲ್ಲಾ ಹೋಮ್ ಸ್ಟೇ ಮತ್ತು ರೆಸಾರ್ಟ್ ಹಾಗೂ ರ್ಯಾಫ್ಟಿಂಗ್ ಮಾಲಿಕರ ಜೊತೆ ಸಭೆ ನಡೆಸುತ್ತೇನೆ. ಜೊಯಿಡಾ ತಾಲೂಕಿನಲ್ಲಿರುವ ಹೋಮ್ ಸ್ಟೇ ಮತ್ತು ರೆಸಾರ್ಟ್ಗಳಿಗೆ ಜೊಯಿಡಾ ಎಂದು ಬೋರ್ಡ್ ಹಾಕಲು ಮತ್ತು ತಾಲೂಕಿನ ಗಣೇಶಗುಡಿಯಲ್ಲಿ ರ್ಯಾಫ್ಟಿಂಗ್ ನಡೆಯುತ್ತದೆ ಎಂಬತೆ ತಿಳಿಸಲು ಸೂಚಿಸುತ್ತೇನೆ.
• ಶೈಲೇಶ ಪರಮಾನಂದ, ಪ್ರ.ತಹಶೀಲ್ದಾರ
ನಮ್ಮ ತಾಲೂಕಿನಲ್ಲಿ ನಡೆಯುವ ರ್ಯಾಫ್ಟಿಂಗ್ಗೆ ದಾಂಡೇಲಿ ಎಂದು ಹೇಳುವುದು ತಪ್ಪು. ಈ ವ್ಯವಸ್ಥೆ ಸರಿಪಡಿಸಬೇಕು. ತಾಲೂಕಾ ಅಧಿಕಾರಿಗಳು, ಆಯಾ ಗ್ರಾಮ ಪಂಚಾಯತಿ ಅಧಿಕಾರಿಗಳು ತಾಲೂಕಿನ ಹೆಸರು ಬಳಕೆಯಾಗುವಂತೆ ಮಾಡಬೇಕು. ಸರಿಪಡಿಸದೇ ಇದ್ದಲ್ಲಿ ತಾಲೂಕಿನ ಜನತೆ ತಾಲೂಕಿನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ.
• ಟಿ.ಕೆ.ದೇಸಾಯಿ, ಸಾಮಾಜಿಕ ಕಾರ್ಯಕರ್ತ