ಸಿದ್ದಾಪುರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ, ಅಸಮರ್ಪಕ ಜಿಪಿಎಸ್‌ಗೆ ಪುನರ್ ಪರೀಶಿಲಿಸಲು ಆಗ್ರಹಿಸಿ ಸಿದ್ಧಾಪುರ ತಾಲೂಕಿನಾದ್ಯಂತ ಅರಣ್ಯ ಅತಿಕ್ರಮಣದಾರರು ಸುಮಾರು 6117ಪುನರ್ ಸರ್ವೇಗೆ ಜಿಲ್ಲಾ ಅರಣ್ಯ ಹಕ್ಕು ಸಮಿತಿಗೆ ಕಾನೂನಾತ್ಮಕ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಅವರು ಸಿದ್ಧಾಪುರ ತಾಲೂಕಿನ ವಾಜಗೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮೇಲ್ಮನವಿ ಸ್ವೀಕೃತ ಪ್ರತಿಗಳನ್ನ ಅರಣ್ಯ ಅತಿಕ್ರಮಣದಾರರಿಗೆ ವಿತರಿಸಿ ಮಾತನಾಡಿದರು.
ಅರಣ್ಯ ಭೂಮಿ ಹಕ್ಕಿಗಾಗಿ ಮಂಜೂರಿ ಪ್ರಕ್ರಿಯೆಯಲ್ಲಿ, ಅರಣ್ಯ ಅತಿಕ್ರಮಣದಾರರು ಸಾಗುವಳಿಗೆ ಸಂಬಂಧಿಸಿ ಜರುಗಿದ ಸರ್ವೇ ಕಾರ್ಯ ಪೂರ್ಣಪ್ರಮಾಣದಲ್ಲಿ ಗುರುತಿಸದೇ ಇರುವುದರಿಂದ, ಅರಣ್ಯ ಸಿಬ್ಬಂದಿಗಳು ಗಡಿ ಗುರುತಿಸುವ ಸಂದರ್ಭದಲ್ಲಿ ಅರಣ್ಯ ಅತಿಕ್ರಮಣದಾರರ ಸಾಗುವಳಿಗೆ ಆತಂಕ ಉಂಟಾಗುವುದರಿಂದ ಮತ್ತು ಅನಾದಿಕಾಲದಿಂದ ಸಾಗುವಳಿ ಭೂಮಿ ಕಬ್ಜಾಕ್ಕೆ ಆತಂಕ ಆಗುವ ಹಿನ್ನೆಲೆಯಲ್ಲಿ ಅಸಮರ್ಪಕ ಜಿಪಿಎಸ್‌ಗೆ ಒಳಗಾಗಿರುವ ಅತಿಕ್ರಮಣದಾರರು ಮೇಲ್ಮನವಿ ಸಲ್ಲಿಸಬೇಕೆಂದು ಅವರು ಆಗ್ರಹಿಸಿದರು.
ಕಾರ್ಯಕ್ರಮದ ನೇತೃತ್ವವನ್ನ ಹೋರಾಟಗಾರರಾದ ಸುನೀಲ್ ನಾಯ್ಕ ಸಂಪಖಂಡ, ಮೋಹನ ಬಿ ನಾಯ್ಕ, ಲೋಕೇಶ್ ಆರ್ ನಾಯ್ಕ, ರಾಮ ತಿಮ್ಮ ನಾಯ್ಕ, ವಿನಾಯಕ ಹುಕ್ಕಳಿ, ಗೋಪಾಲ ನಾಯ್ಕ ಮಾಸ್ತಿಹಕ್ಲು, ಶ್ರೀಧರ ನಾಯ್ಕ ಮುಂಡಿಗೆತಗ್ಗು, ಸುರೇಶ್ ನಾಯ್ಕ ಗಾಳಮಾಂವ ಮುಂತಾದವರು ವಹಿಸಿದ್ದರು.
ಉಚಿತ ಮೇಲ್ಮನವಿ:
ಅರಣ್ಯವಾಸಿಗಳ ಸಾಗುವಳಿ ಭೂಮಿಗೆ ಸಂಬಂಧಿಸಿ ಅಸಮರ್ಪಕ ಜಿಪಿಎಸ್ ಆಗಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳ ಹಿತ ಕಾಪಾಡುವ ದೃಷ್ಠಿಯಿಂದ ಹೋರಾಟಗಾರರ ವೇದಿಕೆಯು ಜಿಲ್ಲಾದ್ಯಂತ ಉಚಿತ ಕಾನೂನಾತ್ಮಕ ಮೇಲ್ಮನವಿ ಕಾರ್ಯ ಜರುಗಿಸುತ್ತಿದ್ದು, ಅರಣ್ಯವಾಸಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.