ಕಾರವಾರ: ವರ್ಷಗಳಿಂದ ಅನ್ನ- ಆಹಾರವಿಲ್ಲದೆ, ಆರೈಕೆ ಕಾಣದೆ ಕತ್ತಲ ಕೋಣೆಯಲ್ಲಿ ನರಳಾಡುತ್ತಿದ್ದ ವೃದ್ಧೆಯೊಬ್ಬರಿಗೆ ನ್ಯಾಯಾಧೀಶರೊಬ್ಬರು ನೆರವಾಗಿ ಮಾನವೀಯತೆ ಮೆರೆದಿದ್ದಾರೆ. ಎದ್ದು ಓಡಾಡಲೂ ಆಗದ ಪರಿಸ್ಥಿತಿಯಲ್ಲಿದ್ದಾಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ನಗರದ ಕೋಡಿಬಾಗದ ಜೋಪಡಿಯೊಂದರಲ್ಲಿ ಕಮಲಾ ಎಂಬ ವೃದ್ಧೆ ವಾಸವಾಗಿದ್ದರು. ವರ್ಷದಿಂದಲೂ ಕೊಂಚ ಮಾನಸಿಕ ಖಿನ್ನತೆಗೆ ಒಳಗಾದವರಂತಿದ್ದು, ಮಲಗಿದ್ದಲ್ಲೆ ಮಲ- ಮೂತ್ರ ವಿಸರ್ಜನೆ ಮಾಡಿಕೊಂಡು ಅದರಲ್ಲೇ ನರಕಯಾತನೆ ಅನುಭವಿಸುತ್ತಿದ್ದರು. ಬದುಕಿದ್ದರೂ ಕೂಡ ಯಾರೊಬ್ಬರು ಈ ವೃದ್ಧೆಯ ಆರೈಕೆಗೆ ಮುಂದಾಗಿರಲಿಲ್ಲ. ಕುಟುಂಬಸ್ಥರು ಕೂಡ ಒಂದು ಲೋಟ ನೀರನ್ನೂ ಕೊಡುತ್ತಿರಲಿಲ್ಲ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನಾಯಾಧೀಶರಾದ ರೇಣುಕಾ ರಾಯ್ಕರ್, ರಾತ್ರೋರಾತ್ರಿ ತಮ್ಮ ತಂಡದೊಂದಿಗೆಗೆ ಸ್ಥಳಕ್ಕೆ ತೆರಳಿ ವೃದ್ಧೆಯ ಪರಿಸ್ಥಿತಿಯನ್ನ ಕಣ್ಣಾರೆ ಕಂಡು ಮರುಕಪಟ್ಟಿದ್ದಾರೆ. ಈಕೆಗೆ ಓರ್ವ ಮಗನಿದ್ದಾನೆನ್ನಲಾಗಿದ್ದು, ನ್ಯಾಯಾಧೀಶರ ಭೇಟಿಯ ವೇಳೆ ಆತ ಸ್ಥಳದಲ್ಲಿ ಇರಲಿಲ್ಲ. ಸ್ಥಳೀಯರು ಕೂಡ ವೃದ್ಧೆಯ ಬಗ್ಗೆ ಯಾವುದೇ ಮಾಹಿತಿ ನೀಡಲು ತಯಾರಿರಲಿಲ್ಲ. ಬಳಿಕ ವೃದ್ಧೆಯ ಸಹೋದರನೊಬ್ಬನಿದ್ದಾನೆಂದು ತಿಳಿದು ಸಂಪರ್ಕ ಮಾಡಿ ಸ್ಥಳಕ್ಕೆ ಕರೆಯಿಸಿದಾಗ ನ್ಯಾಯಾಧೀಶರೊಂದಿಗೇ ಆತ ಏರುಧ್ವನಿಯಲ್ಲಿ ಮಾತನಾಡಲು ಮುಂದಾಗಿದ್ದಾನೆ.
ಈ ವೇಳೆ ನ್ಯಾಯಾಧೀಶರೂ ಸಿಟ್ಟಿಗೆದ್ದು ವೃದ್ಧೆಯ ಸಂಬಂಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ನಾನು ನ್ಯಾಯಾಧೀಶಳಾಗಿ ಇಲ್ಲಿಗೆ ಬಂದಿಲ್ಲ. ಮನುಷ್ಯಳಾಗಿ ಇಲ್ಲಿಗೆ ಬಂದಿದ್ದೇನೆ. ಮನುಷ್ಯರಾದವರು ಮನುಷ್ಯರಿಗೆ ಎರಡು ತುತ್ತು ಊಟ ಹಾಕಿದರೆ ಇಂಥ ಪರಿಸ್ಥಿತಿ ಬರುವುದಿಲ್ಲ. ಮನುಷ್ಯತ್ವ ಇಲ್ಲದಂತೆ ನಡೆದುಕೊಂಡಿದ್ದೀರಲ್ಲ’ ಎಂದು ಸಂಬ0ಧಿಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರೆ ಮಾನಸಿಕ ಚಿಕಿತ್ಸಾ ಕೇಂದ್ರಗಳಿಗೆ ಕಳುಹಿಸಬೇಕಿತ್ತು. ನಿಮಗಾಗಿಲ್ಲವೆಂದರೆ ಅಲ್ಲಿಯಾದರೂ ನೋಡಿಕೊಳ್ಳುತ್ತಿದ್ದರು. ಆದರೆ ಈ ರೀತಿ ಕೊಚ್ಚೆಯಲ್ಲಿ ಬಿಟ್ಟಿದ್ದೀರಲ್ಲಾ, ಯಾರಾದರೂ ಮನುಷ್ಯರು ಮಾಡುವ ಕೆಲಸವಾ ಇದು’ ಎಂದು ಪ್ರಶ್ನಿಸಿದ್ದಾರೆ.
ಬಳಿಕ ತಕ್ಷಣ 108 ಅಂಬ್ಯುಲೆನ್ಸ್ ಮೂಲಕ ವೃದ್ಧೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರೊಂದಿಗೆ ಮಾತನಾಡಿ, ವೃದ್ಧೆಗೆ ಸಮರ್ಪಕವಾಗಿ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೇ ನಗರಸಭೆಯ ಮೂಲಕ ವೃದ್ಧೆಯ ಮನೆ ದುರಸ್ತಿ ಮಾಡಿಸಿ ಆಕೆಗೆ ವಾಸಕ್ಕೆ ಅನುಕೂಲ ಮಾಡಿಕೊಡಲಾಗುವುದು. ಅಲ್ಲದೇ ವೃದ್ಧೆಗೆ ಅವಶ್ಯ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾ.ರೇಣುಕಾ ತಿಳಿಸಿದ್ದಾರೆ.