Slide
Slide
Slide
previous arrow
next arrow

ಕುಡಿತದ ಅಡ್ಡೆಯಾದ ಜಮಗುಳಿ ಕ್ರಾಸ್: ಸೂಕ್ತ ಕ್ರಮಕ್ಕೆ ಆಗ್ರಹ

300x250 AD

ಯಲ್ಲಾಪುರ: ಪಟ್ಟಣದಿಂದ ನಾಲ್ಕು ಕಿ.ಮೀ. ದೂರದ ಹುಬ್ಬಳ್ಳಿ ರಸ್ತೆ ರಾಷ್ಟ್ರೀಯ ಹೆದ್ದಾರಿ 63ರ ಜಮಗುಳಿ ಕ್ರಾಸ್ ಬಳಿ ನಿರಂತರವಾಗಿ ಗುಂಪು ಗುಂಪಾಗಿ ಕಿಡಗೇಡಿಗಳು ಕುಡಿಯುವ ಜಾಗವಾಗಿ ಮಾಡಿಕೊಂಡಿದ್ದು, ಸ್ಥಳೀಯರು ಭಯಭೀತರಾಗಿ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಕೇವಲ ಒಂದೇ ಒಂದು ಬಾರ್ ಇರುವುದರಿಂದ ವೈನ್ ಶಾಪ್‌ಗಳಲ್ಲಿ ಬಾಟಲಿಗಳನ್ನು ಖರೀದಿಸಿರುವ ಗ್ರಾಹಕರು ಕುಡಿಯಲು ಸ್ಥಳವಿಲ್ಲದೆ ಎಲ್ಲಿ ಬೇಕಲ್ಲಿ ನಿಂತು ಕುಡಿದು ಬಾಟಲಿ ಹಾಗೂ ಸ್ಯಾಚೇಟ್‌ಗಳನ್ನು ಎಸೆದು ಹೋಗುತ್ತಿದ್ದಾರೆ. ಅದೇ ರೀತಿ ಗ್ರಾಮೀಣ ಭಾಗದ ಕೆಲವು ಕಡೆ ರಸ್ತೆಗಳನ್ನು ಕುಡಿತದ ಅಡ್ಡೆಗಳನ್ನಾಗಿ ಮಾಡಿಕೊಂಡು ಸ್ಥಳೀಯ ಜನರಿಗೆ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ. ಬಿಸಗೋಡ್ ರಸ್ತೆಯಲ್ಲಿ ಕುಡಿಯುತ್ತಿದ್ದ ಜನರನ್ನು ಅಲ್ಲಿಯ ಸ್ಥಳೀಯರು ಕುಡಿತಕ್ಕೆ ಅವಕಾಶ ನೀಡದೇ ಓಡಿಸಿದ್ದರು. ಹೀಗಾಗಿ ಇದೀಗ ಜಮಗುಳಿ ಕ್ರಾಸ್ ಅನ್ನು ಕುಡಿತದ ಅಡ್ಡೆಯಾಗಿ ಪರಿವರ್ತಿಸಿಕೊಂಡಿದ್ದಾರೆ.
ಜಮಗುಳಿ ಕ್ರಾಸ್ ಬಳಿ ಹಗಲು ರಾತ್ರಿ ಅನ್ನದೆ ಕುಡುಕರ ಕಾಟ ವಿಪರೀತವಾಗಿದೆ. ಸಾತೋಡ್ಡಿ, ಮಾಗೋಡ, ಶಿರ್ಲೇ ಮುಂತಾದ ಜಲಪಾತದ ಪ್ರವಾಸಕ್ಕೆಂದು ಬರುವ ಹೊರ ಊರಿನವರು ಹಾಗೂ ಅಕ್ಕಪಕ್ಕದ ನಿವಾಸಿಗಳು ಜಮಗುಳಿ ಕ್ರಾಸ್ ಬಳಿ ಬಂದು ಮೋಜು ಮಸ್ತಿ ಮಾಡಿ ಕಸವನ್ನು ಚೆಲ್ಲಿ ಹೋಗುತ್ತಿದ್ದಾರೆ. ಸಾಯಂಕಾಲದ ಸಮಯದಲ್ಲಿ ಹೆಚ್ಚಾಗಿ ಬರುವುದರಿಂದ ಶಾಲೆಗೆ ಮತ್ತು ಕೆಲಸಕ್ಕೆ ಹೋದ ಹೆಣ್ಣುಮಕ್ಕಳು ಭಯದಿಂದ ಓಡಾಡುವ ಪರಿಸ್ಥಿತಿ ಬಂದಿದೆ. ಮೊದಲು ಆಗೊಮ್ಮೆ ಈಗೊಮ್ಮೆ ಕುಡಿಯಲು ಬರುತ್ತಿದ್ದವರು ಈಗ ನಿರಂತರವಾಗಿ ಬರುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಜಮಗುಳಿ ನಿವಾಸಿಗಳಾದ ಭಾಸ್ಕರ ಗಾಂವ್ಕರ, ಮಹಾಬಲೇಶ್ವರ ಗಾಂವ್ಕರ, ಸುರೇಶ್ ಗುಂಜಿಕರ, ಮಂಜುನಾಥ ಮರಾಠಿ ಮುಂತಾದವರು ತಿಳಿಸುತ್ತಾರೆ. ಕುಡುಕರಿಂದಾಗಿ ಯಾವುದೇ ರೀತಿಯ ಅಪರಾಧ ಪ್ರಕರಣಗಳು ನಡೆಯುವ ಪೂರ್ವ ಜಮಗುಳಿ ಕ್ರಾಸ್ ಬಳಿ ಕುಡಿಯಲು ಬರುವವರ ವಿರುದ್ಧ ಕ್ರಮ ಆಗಬೇಕೆಂದು ಅವರು ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top