ಕುಮಟಾ: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಉಚಿತ ಕಾನೂನಿನ ಸದುಪಯೋಗ ಪಡಿಸಿಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಭಾಮಿನಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅವರು ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ದಿನಾಚರಣೆ ಮತ್ತು ಕಾನೂನು ಅರಿವು ಮತ್ತು ಪ್ರಭಾವದ ಮೂಲಕ ನಾಗರಿಕರ ಸಬಲೀಕರಣದ ಕುರಿತು ನಡೆದ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಈ ದೇಶದ ಭದ್ರ ಬುನಾದಿ ಇದ್ದಂತೆ. ಎಲ್ಲರೂ ಸೇರಿ ಸುಭದ್ರ ಭಾರತವನ್ನು ನಿರ್ಮಿಸೋಣ ಎಂದರು. ಸಂವಿಧಾನದ ಆಶಯಗಳಿಗೆ ದಕ್ಕೆ ಬರದಂತೆ ನಾವೆಲ್ಲರೂ ಒಂದು ಎಂಬ ಭ್ರಾತೃತ್ವ ಭಾವನೆಯೊಂದಿಗೆ ಸಾಗೋಣವೆಂದರು.
ಪಿಎಸ್‌ಐ ನವೀನ್ ನಾಯ್ಕ ಸೈಬರ್ ಕ್ರೈಮ್ ಕುರಿತಾಗಿ ಮಾಹಿತಿ ನೀಡಿದರು. ವಕೀಲ ಎನ್.ಎಸ್.ಹೆಗಡೆ ಕಾನೂನಿನಲ್ಲಿ ಮಹಿಳೆಗೆ ಸಿಗುವ ಸೌಲಭ್ಯಗಳ ಕುರಿತು ತಿಳಿಸಿದರು. ಮಹಿಳೆ ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಉಪನ್ಯಾಸಕಿ ಶಿಲ್ಪಾ ಬಿ.ಎಂ ವಿವರಿಸಿದರು.
ಕಾಲೇಜಿನ ಪ್ರಾಚಾರ್ಯೆ ವಿಜಯಾ ನಾಯ್ಕ ಮಾತನಾಡಿ, ಮಹಿಳೆ ಕುಟುಂಬ ಹಾಗೂ ಉದ್ಯೋಗಕ್ಷೇತ್ರದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತ ಸಾಗುತ್ತಿದ್ದಾಳೆ. ಈ ಸವಾಲಿನ ದಾರಿಯಲ್ಲಿ ಕಾನೂನು ಅವಳಿಗೆ ಬೆಂಗಾವಲಾಗಿ ನಿಲ್ಲಬೇಕಿದೆ ಎಂದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕರಾದ ರಮ್ಯಶ್ರೀ ಎಂ.ಜಿ ಹಾಗೂ ಕಾಲೇಜಿನ ಮಹಿಳಾ ಆಭ್ಯುದಯ ವೇದಿಕೆಯ ಸಂಚಾಲಕರಾದ ನಾಗಮಣಿ ಸಿ.ಜೆ ಹಾಜರಿದ್ದರು.