ಶಿರಸಿ: ಕನ್ನಡ ನಾಡು ನುಡಿ ನಮನ ಮತ್ತು ಪುನೀತ್ ರಾಜಕುಮಾರ ನೆನಪು ಕಾರ್ಯಕ್ರಮದ ಅಂಗವಾಗಿ ವಿಶಿಷ್ಟ ಜಾನಪದ ನೃತ್ಯ, ಡೊಳ್ಳು, ಕುಂಭಮೇಳ, ರಾರಾಜಿಸುವ ಕನ್ನಡಾಂಬೆಯ ಧ್ವಜ, ಸ್ಥಬ್ಧ ಚಿತ್ರ, ಜೂನಿಯರ್ ರಾಜಕುಮಾರ ಉಪಸ್ಥಿತಿಯಲ್ಲಿ ನಗರದಲ್ಲಿ ಭವ್ಯ ಮೆರವಣಿಗೆ ಜರುಗಿತು.
ಸ್ಫಂದನಾ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ರವೀಂದ್ರ ನಾಯ್ಕ, ಡೊಳ್ಳು ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿ, ಮಾರಿಕಾಂಬಾ ದೇವಾಲಯದ ಎದುರು ಮೆರವಣಿಗೆ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳ ಮೂಲಕ ವಿಕಾಸ ಆಶ್ರಮ ಮೈದಾನದವರೆಗೂ ಸಂಚರಿಸಿತು.
ಜಡ್ಡಿಗದ್ದೆಯ ಸಿದ್ಧಿ ಸಮಾಜದ ಧಮಾಮಿ ನೃತ್ಯ, ವಾಲ್ಮೀಕಿ ಸಮಾಜದ ವಿಶಿಷ್ಟ ಕಲೆಯಾದ ಲಮಾಣಿ ನೃತ್ಯ, ನಿಲ್ಕುಂದದ ಡೊಳ್ಳು ಕುಣಿತ, ಕುಂಭಮೇಳ, ಯಕ್ಷಗಾನ, ಪುನೀತ್ ಮತ್ತು ಭುವನೆಶ್ವರಿಯ ಸ್ಥಬ್ಧ ಚಿತ್ರ, ಜೂನಿಯರ್ ರಾಜಕುಮಾರ್ ಹಾವ -ಭಾವಗಳು ಜಾಥದ ವಿಶೇಷ ಆಕರ್ಷಣೆಯಾಗಿದ್ದವು. ಪುನೀತ್ ರಾಜಕುಮಾರ ಅಭಿಮಾನಿಗಳು ನೃತ್ಯಕ್ಕೆ ಹೆಜ್ಜೆ ಹಾಕಿರುವುದು ಜಾಥದ ಮೆರಗು ಹೆಚ್ಚಿಸಿದವು.
ಜಾಥದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಮಂಜು ಶೆಟ್ಟಿ, ಮಹೇಶ್ ಶೆಟ್ಟಿ, ಕಾರ್ತಿಕ್, ಎಮ್ ಆರ್ ನಾಯ್ಕ, ಲಕ್ಷ್ಮಣ್ ಮಾಳ್ಳಕ್ಕನವರ, ನೆಹರೂ ನಾಯ್ಕ, ಹರಿ ನಾಯ್ಕ, ಬಾಬು ಮರಾಠಿ, ರಾಜು ಮುಕ್ರಿ ಮುಂತಾದವರು ನೇತ್ರತ್ವ ವಹಿಸಿದ್ದರು.
ರಾರಾಜಿಸಿದ ಕನ್ನಡ ಬಾವುಟ:
ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಕನ್ನಡ ನಾಡು ನುಡಿ ನಮನ-ಪುನೀತ್ ರಾಜಕುಮಾರ್ ನೆನಪು ಕಾರ್ಯಕ್ರಮದಲ್ಲಿ ಕನ್ನಡ ಬಾವುಟವು ರಾರಾಜಿಸಿರುವುದು ಜಾಥದಲ್ಲಿ ವಿಶೇಷವಾಗಿತ್ತು.