ಕುಮಟಾ: ಮತದಾರರ ವಿಶೇಷ ಪರಿಷ್ಕರಣೆಯ ನಿಮಿತ್ತ ಪಟ್ಟಣದಾದ್ಯಂತ ಸಂಚರಿಸಿದ ಜಾಥಾವು ಸಾರ್ವಜನಿಕರಲ್ಲಿ ಮತದಾರರ ವಿಶೇಷ ಪರಿಷ್ಕರಣೆಯ ಕುರಿತು ಜಾಗೃತಿ ಮೂಡಿಸಿತು.
ಮತದಾರರ ವಿಶೇಷ ಪರಿಷ್ಕರಣೆಯ ನಿಮಿತ್ತ ತಾಲೂಕು ಆಡಳಿತದಿಂದ ಸಂಘಟಿಸಲಾದ ಜಾಗೃತಿ ಜಾಥಕ್ಕೆ ತಹಸೀಲ್ದಾರ ವಿವೇಕ ಶೇಣ್ವಿ ಚಾಲನೆ ನೀಡಿದರು. ಪಟ್ಟಣದ ಮಾಸ್ತಿಕಟ್ಟೆಯ ವೃತ್ತದಿಂದ ಆರಂಭವಾದ ಮತದಾರರ ವಿಶೇಷ ಪರಿಷ್ಕರಣೆಯ ಜನಜಾಗೃತಿ ಜಾಥಾವು ಹೆದ್ದಾರಿ ಮೂಲಕ ಸಂಚರಿಸಿ, ಗಿಬ್ ವೃತ್ತದಲ್ಲಿ ಕೊನೆಗೊಂಡಿತು. ಸರ್ಕಾರಿ ಅಧಿಕಾರಿಗಳು ಮತ್ತು ನೆಲ್ಲಿಕೇರಿ ಹನುಮಂತ ಬೆಣ್ಣೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡು ಜನರಲ್ಲಿ ಜಾಗೃತಿ ಮೂಡಿಸಿದರು.
ತಹಸೀಲ್ದಾರ್ ವಿವೇಕ ಶೇಣ್ವಿ ಅವರು ಮತದಾರರ ವಿಶೇಷ ಪರಿಷ್ಕರಣೆಯ ಕುರಿತು ಮಾಹಿತಿ ನೀಡಿದರು. ಈ ಜಾಥದಲ್ಲಿ ಗ್ರೇಡ್-2 ತಹಸೀಲ್ದಾರ ಅಶೋಕ ಭಟ್ಟ, ಸಿ.ಪಿ.ಐ ತಿಮ್ಮಪ್ಪ ನಾಯ್ಕ, ಗ್ರೇಡ್-2 ತಹಸೀಲ್ದಾರ ಸತೀಶ ಗೌಡ, ತಹಸೀಲ್ದಾರ್ ಕಚೇರಿಯ ಚುನಾವಣಾ ವಿಭಾಗದ ಮಧುರಾ ನಾಯ್ಕ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸತೀಶ ನಾಯ್ಕ ಸೇರಿದಂತೆ ಹನುಮಂತ ಬೆಣ್ಣೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಜಾಥಾವನ್ನು ಯಶಸ್ವಿಗೊಳಿಸಿದರು.