ದಾಂಡೇಲಿ: ಸರಕಾರದ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಅಮೃತ ಸರೋವರ ಯೋಜನೆಯಡಿ ಕೆರೆ ಅಭಿವೃದ್ಧಿಗಾಗಿ ದಾಂಡೇಲಿ ತಾಲೂಕಿನ ಕೋಗಿಲಬನ/ಬಡಕಾನಶಿರಡಾ ಗ್ರಾಮ ಪಂಚಾಯ್ತು ವ್ಯಾಪ್ತಿಯಲ್ಲಿ ಬರುವ ಬಡಕಾನಶಿರಡಾದ ಕೆರೆಯನ್ನು ಆಯ್ಕೆಗೊಳಿಸಲಾಗಿದ್ದು, ಈಗಾಗಲೆ ಈ ಕಾಮಗಾರಿಗಾಗಿ ಅನುದಾನವನ್ನು ಮೀಸಲಾಗಿಡಲಾಗಿದೆ.
ಈ ಹಿನ್ನಲೆಯಲ್ಲಿ ಅಮೃತ ಸರೋವರ ಯೋಜನೆಗೆ ಸಂಬಂಧಪಟ್ಟಂತೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮುಖ್ಯ ಅಭಿಯಂತರರಾದ ಸಿ.ಕೆ.ಮಲ್ಲಪ್ಪ ಅವರ ನೇತೃತ್ವದಲ್ಲಿ ಉ.ಕ ಜಿಲ್ಲಾ ಪಂಚಾಯ್ತು ಇಲ್ಲಿಯ ಅಭಿವೃದ್ಧಿ ವಿಭಾಗದ ಉಪ ಕಾರ್ಯದರ್ಶಿ ಡಿ.ಜಕ್ಕಪ್ಪಾಗೊಳ್ ಹಾಗೂ ಅಧಿಕಾರಿಗಳಾದ ಸುಗಂದಾ ದಾಮೇಕರ, ಎಂ.ಶಿವರಾಯ ಅವರುಗಳ ತಂಡ ಬುಧವಾರ ಬಡಕಾನಶಿರಡಾದ ಕೆರೆಯನ್ನು ವೀಕ್ಷಿಸಲು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಕೋಗಿಲಬನ/ಬಡಕಾನಶಿರಡಾ ಗ್ರಾ.ಪಂ ಅಧ್ಯಕ್ಷರಾದ ಅಶೋಕ ನಾಯ್ಕ, ಗ್ರಾ.ಪಂ ಸದಸ್ಯ ಗೋಕುಲ ಮಿರಾಶಿ, ಗ್ರಾಮ ಪಂ ಅಭಿವೃದ್ಧಿ ಅಧಿಕಾರಿ ಸುರೇಶ ಮಡಿವಾಳ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.