ಶಿರಸಿ: ತಾಲೂಕಿನ ಬನವಾಸಿಯ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಬುಧವಾರ ಬನವಾಸಿಯ ಮುಖ್ಯಬೀದಿಗಳಲ್ಲಿ ಬ್ಯಾನರ್ ಹಿಡಿದು ಜಾಥಾ ನಡೆಸಿದರು.
ಪ್ರಜಾಪ್ರಭುತ್ವದ ಬೆನ್ನೆಲುಬಾದ ಪ್ರಜೆಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ, 18 ವರ್ಷಕ್ಕೆ ಮೇಲ್ಪಟ್ಟ ಎಲ್ಲರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವಂತೆ ಜಾಗೃತಿ ಮೂಡಿಸಲು ಈ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಘೋಷಣೆಗಳುಳ್ಳ ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಬನವಾಸಿಯ ಮುಖ್ಯ ರಸ್ತೆಗಳಲ್ಲಿ ಸಂಚಾರ ನಡೆಸಿದರು. ಕಾಲೇಜಿನ ಪ್ರಾಚಾರ್ಯ ಎಂ. ಕೆ. ನಾಯ್ಕ ಹೊಸಳ್ಳಿ ಹಾಗೂ ಉಪನ್ಯಾಸಕರು ಮತ್ತು ತಾಲೂಕ ಆಡಳಿತದ ಪರವಾಗಿ ಕಂದಾಯ ನಿರೀಕ್ಷಕರು ಹಾಗೂ ಉಪತಹಸಿಲ್ದಾರರು, ಜೊತೆಗೆ ಶಾಲಾ ಶಿಕ್ಷಕರುಗಳು ಪಾಲ್ಗೊಂಡಿದ್ದರು.