ಕುಮಟಾ: ಐತಿಹಾಸಿಕ ಕೋಟೆ ಇರುವ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಆರೋಗ್ಯ ಇಲಾಖೆ ಈಗಾಗಲೇ ಹಸಿರು ನಿಶಾನೆ ತೋರಿರುವ ಮಿರ್ಜಾನ್‌ನಲ್ಲಿ ಮಡಗಾಂವ್- ಮಂಗಳೂರು ಇಲೆಕ್ಟ್ರಿಕಲ್ ಮೆಮುರಕ್ ರೇಲ್ವೆಗೆ ಮಿರ್ಜಾನ್ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸುವಂತೆ ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಿರ್ಜಾನದಲ್ಲಿ ನಿಲ್ದಾಣ ಆಗಿದ್ದಾಗಿನಿಂದಲೂ ಕೇವಲ ಲೋಕಲ್ ಟ್ರೇನ್ ಮಾತ್ರ ನಿಲುಗಡೆಯಾಗುತ್ತದೆ. ಆದರೆ ಎಕ್ಸ್ಪ್ರೆಸ್ ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಮಿರ್ಜಾನ್ ಗ್ರಾ.ಪಂ ದಲ್ಲಿ ಅತಿ ಹೆಚ್ಚು ಹಳ್ಳಿಗಳಿದ್ದು ಇಲ್ಲಿನ ಬಹುತೇಕ ಜನ ಬಡವರಾಗಿದ್ದಾರೆ. ಗೋವಾ ಅಥವಾ ಮಂಗಳೂರಿಗೆ ಬಸ್‌ನಲ್ಲಿ ಪ್ರಯಾಣಿಸಲು ದುಬಾರಿಯಾಗಿದೆ. ರೇಲ್ವೆ ನಿಲುಗಡೆಯಿಂದ ಕಡಿಮೆ ದರದಲ್ಲಿ ಸಂಚರಿಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಶಾಸಕ ದಿನಕರ ಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕೆನರಾ ಸಂಸದ ಅನಂತಕುಮಾರ ಹೆಗಡೆ ಅವರು ಹೆಚ್ಚಿನ ಮುತುವರ್ಜಿ ವಹಿಸಿ ಮುಂಜಾನೆ ಹಾಗೂ ಸಂಜೆ ಹೊರಡುವ ರೇಲ್ವೆ ನಿಲುಗಡೆಗೆ ಅಗತ್ಯ ಕ್ರಮ ವಹಿಸಬೇಕೆಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಗಣೇಶ ಅಂಬಿಗ, ಸದಸ್ಯ ನಾಗರಾಜ ನಾಯ್ಕ, ಹಿರಿಯ ಸದಸ್ಯ ಪರ್ಷು ಫರ್ನಾಂಡಿಸ, ವಿನಾಯಕ ನಾಯ್ಕ, ಮಾಜಿ ಕರ್ನಲ್ ಪಿ.ಎಮ್.ನಾಯ್ಕ, ಪ್ರಶಾಂತ ನಾಯ್ಕ, ರೋಷನ್ ನಾಯ್ಕ, ಸಂತೋಷ ನಾಯ್ಕ ಗೋಪಾಲ ನಾಯ್ಕ ಮಂಜುನಾಥ ಮುಕ್ರಿ ಇತರರು ಆಗ್ರಹಿಸಿದ್ದಾರೆ.