ಸಿದ್ದಾಪುರ: ಕನ್ನಡ ಭಾಷೆಯ ಉಳಿವು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಮ್ಮ ನಾಡಿನ ಸಂಸ್ಕೃತಿ, ಪರಂಪರೆಗಳ ಗುರುತುಗಳನ್ನು ಉಳಿಸಿಕೊಳ್ಳುವುದು. ಆ ನಿಟ್ಟಿನಲ್ಲಿ ಕನ್ನಡಿಗರ ಕುಲದೇವಿ ಭುವನಗಿರಿಯ ಶ್ರೀಭುವನೇಶ್ವರಿ ದೇವಿಯ ಸನ್ನಿಧಾನದಲ್ಲಿ ಕದಂಬ ಸೈನ್ಯ ಸಂಘಟನೆ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನ.15ರಂದು ಆಯೋಜಿಸಿದೆ ಎಂದು ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಕದಂಬ ಸೈನ್ಯ ಕನ್ನಡ ಸಂಘಟನೆಯು 2009ರಿಂದ 2021ರವರೆಗೆ ಕದಂಬರ ರಾಜಧಾನಿ ಬನವಾಸಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭ ಆಯೋಜಿಸಿಕೊಂಡು ಬಂದಿತ್ತು. ಅಲ್ಲಿಂದ ಭುವನೇಶ್ವರಿ ದೇವಿಯ ಸನ್ನಿಧಾನಕ್ಕೆ ಬಂದು ನಾಡದೇವತೆಯ ದರ್ಶನ ಪಡೆಯುತ್ತಿದ್ದೆವು. 2022ರಿಂದ ಪ್ರಪ್ರಥಮವಾಗಿ ನ.15ರಿಂದ ಭುವನಗಿರಿಯಲ್ಲಿ ಈ ಕಾರ್ಯಕ್ರಮ ಹಮ್ಮಿಒಂಡಿದ್ದು, ದೇವಾಲಯ ಆಡಳಿತ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಸಂಪೂರ್ಣ ಸಹಕಾರ ನೀಡಲು ಒಪ್ಪಿಕೊಂಡಿದ್ದಾರೆ. ಅವರಿಗೆ ಗೌರವಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ನಾಡಸೇವೆ, ಸಮಾಜಸೇವೆ, ಕಲಾಕ್ಷೇತ್ರ, ಪ್ರಗತಿಪರ ಕೃಷಿಕರು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರುಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವದು. ಉತ್ತರ ಕನ್ನಡ, ಮಂಡ್ಯ, ರಾಮನಗರ,ಮೈಸೂರು ಸೇರಿದಂತೆ ಎಲ್ಲ ಜಿಲ್ಲೆಗಳಿಂದ ಪ್ರಶಸ್ತಿ ಪುರಸ್ಕೃತರು ಆಗಮಿಸಲಿದ್ದಾರೆ. ನಮ್ಮ ಕನ್ನಡದ ಗೌರವ ತಾಣ ಭುವನಗಿರಿ. ಈ ಕ್ಷೇತ್ರದ ಬಗ್ಗೆ ಪ್ರತಿಯೊಬ್ಬ ಕನ್ನಡಿಗನಿಗೂ ತಿಳಿಸುವದು ನಮ್ಮ ಉದ್ದೇಶ ಎಂದರು.
ಕನ್ನಡ ಭಾಷೆಯ ಬೇರುಗಳನ್ನು ಸಡಿಲಗೊಳಿಸಿ ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ಅದರ ಸ್ಥಾನಮಾನಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಕನ್ನಡ ಮಾತನಾಡುವವರಿಗೆ ಉದ್ಯೋಗದ ಕೊರತೆ ಸೃಷ್ಟಿಸಿ, ಅನ್ಯಭಾಷೆಯಲ್ಲಿ ವ್ಯಾವಹಾರಿಕ ಪ್ರಜ್ಞೆ, ಆಡಳಿತ ಪ್ರಜ್ಞೆಯನ್ನು ಹೆಚ್ಚಿಸಿ ಕನ್ನಡಿಗರು ಭಾಷಾ ವಲಸಿಗರಾಗುವ ಸನ್ನಿವೇಶ ಸೃಷ್ಟಿಸಲಾಗುತ್ತಿದೆ. ಇದು ಭಾಷಾ ಮತಾಂತರದ ಸ್ವರೂಪವಾಗಿದೆ ಎಂದು ಉದಾಹರಣೆಗಳ ಸಹಿತ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಉ.ಕ.ಜಿಲ್ಲಾ ಸಂಚಾಲಕ ಪುರಂದರ ನಾಯ್ಕ ಸರಳಗಿ, ಶಿರಸಿ ತಾಲೂಕು ಸಂಚಾಲಕ ಗುತ್ಯಪ್ಪ ಮಾದರ್ ಕಪ್ಪಗೇರಿ ಬನವಾಸಿ ಇದ್ದರು.