ಕಾರವಾರ: ಕರಾವಳಿ ಉತ್ಸವ ಆಚರಣೆ ಬಗ್ಗೆ ಸಾರ್ವಜನಿಕರು ಒತ್ತಾಯಿಸುತ್ತಿದ್ದು, ಜನಪ್ರತಿನಿಧಿಗಳು, ಸರಕಾರದ ಜೊತೆಗೆ ಚರ್ಚೆ ಮಾಡಿ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅದ್ಧೂರಿಯಾಗಿ ಕರಾವಳಿ ಉತ್ಸವ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ. ಆದಷ್ಟು ಶೀಘ್ರದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಹೆಂಜಾ ನಾಯ್ಕ ಅವರ ಹೆಸರಿನ ಸೇನಾ ಪೂರ್ವ ತರಬೇತಿ ಶಾಲೆಯನ್ನು ನ.21ಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಉದ್ಘಾಟಿಸಲಿದ್ದಾರೆ. ಜಿಲ್ಲೆಯಲ್ಲಿ 4 ತಿಂಗಳಿಗೆ ಒಮ್ಮೆಯಂತೆ ವರ್ಷಕ್ಕೆ 3 ಬಾರಿ ನಡೆಯುವ ಸೇನಾ ಪೂರ್ವ ತರಬೇತಿಗೆ ಈಗಾಗಲೇ 125 ಅಭ್ಯರ್ಥಿಗಳು ತರಬೇತಿಗೆ ಆಯ್ಕೆಯಾಗಿದ್ದಾರೆ. ಈ ತರಬೇತಿಯು ಅಗ್ನಿಪಥ್ ಯೋಜನೆಗೆ ಪೂರಕವಾಗಲಿದೆ. ಸದ್ಯ ತರಬೇತಿ ಶಾಲೆಗೆ ಸ್ವಂತ ಕಟ್ಟಡ ಇಲ್ಲ, ಹೀಗಾಗಿ ಕಾರವಾರದ ಸರಕಾರಿ ಎಂಜಿನಿಯರಿಂಗ್ ಕಾಲೇಜಿನ ಖಾಲಿ ಜಾಗದಲ್ಲಿ ನಡೆಸುತ್ತೇವೆ. ಮುಂದೆ ಸ್ವಂತ ಕಟ್ಟಡ ನಿರ್ಮಿಸಲಾಗುತ್ತದೆ ಎಂದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕುರಿತು ಪ್ರಶ್ನಿಸಿದಾಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮಯ ಕೇಳಲಾಗಿದೆ. ಅವರು ಆಗಮಿಸಿ ಅತಿಶೀಘ್ರದಲ್ಲಿ ಶಂಕು ಸ್ಥಾಪನೆ ಮಾಡುತ್ತಾರೆ. ಈ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಂತೂ ಖಚಿತ ಎಂದು ನುಡಿದರು.