ಶಿರಸಿ: ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಬಂಡಲ ಗ್ರಾಮ ಪಂಚಾಯತ ವ್ಯಾಪ್ತಿಯ, ಗಿಳಿಲಗುಂಡಿ ಗ್ರಾಮಕ್ಕೆ ಕಳೆದ ಎರಡು ದಶಕದಿಂದ ಬೇಡಿಕೆಯಾದ ಸಂಪರ್ಕ ಸೇತುವೆ ಮಂಜೂರಿ ಈಡೇರಿಕೆಗೆ ಗ್ರಾಮಸ್ಥರಿಂದ ಕೇಳಿಬರುತ್ತಿದೆ.
ಮಂಜಗುಣಿಯ ವೆಂಕಟರಮಣ ದೇವರ ಉಗಮ ಸ್ಥಾನವಾಗಿರುವ ಗಿಳಿಲಗುಂಡಿ ಗ್ರಾಮವು ಧಾರ್ಮಿಕ ಕೇಂದ್ರ ಬಿಂದುವಾಗಿದ್ದು, ವರ್ಷಕ್ಕೆ ಒಮ್ಮೆ ಮಂಜಗುಣಿಯಿಂದ ವೆಂಕಟರಮಣ ದೇವರ ಪಲ್ಲಕ್ಕಿಯನ್ನ ಸೇತುವೆವಿಲ್ಲದ ಗ್ರಾಮಸ್ಥರಿಂದ ನಿರ್ಮಿಸಿಕೊಂಡ ತಾತ್ಪೂರ್ತಿಕ ವ್ಯವಸ್ಥೆಯಿಂದಲೇ ದೇವರನ್ನ ಕರೆ ತರುವ ಪ್ರಕ್ರಿಯೆ ಜರುಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪೂರ್ಣಪ್ರಮಾಣದ ಸೇತುವೆ ಸಂಪರ್ಕಕ್ಕಾಗಿ ಗ್ರಾಮಸ್ಥರಿಂದ ಆಗ್ರಹ ಕೇಳಿಬರುತ್ತಿದೆ.
ರೇವಣಕಟ್ಟಾ ಹೊಳೆಪುಟ್ಟದಮನೆ, ಕೊಡೆಗದ್ದೆ, ಸೋಮನಳ್ಳಿ, ತಪ್ಪಲತೋಟ, ಬಾಳೆಗದ್ದೆ, ಕಬ್ಬಿನಮನೆ, ಜಡ್ಲಮನೆ, ಭಾಗಿಮನೆ, ಗಿಳಿಲಗುಂಡಿ , ಐಗನಮನೆ, ಮಾಗೇತೋಟ ಮುಂತಾದ ಹಳ್ಳಿಗಳಿಂದ ಶಿರಸಿ-ಕುಮಟ ರಸ್ತೆಗೆ ಸಂಪರ್ಕಕ್ಕೆ ಸೇತುವೆ ಸಹಾಯವಾಗುವುದು. ಸುಮಾರು 400 ಮನೆ ಕುಟುಂಬಗಳಿಗೆ ಕುಮಟಾಕ್ಕೆ ಹೋಗಲು 12 ಕೀ.ಮೀ ಅಂತರ ಕಡಿಮೆ ಆಗುವುದೆಂದು ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷೆ ಸಾವಿತ್ರಿ ಮತ್ತು ನಾರಾಯಣ ಗೌಡ ಐಗನಮನೆ ದಂಪತಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ ಎರಡು ದಶಕದಿಂದ ಸೇತುವೆ ಸಂಪರ್ಕಕ್ಕೆ ಸರಕಾರದ ಗಮನ ಸೆಳೆದಾಗಲೂ ಸೇತುವೆ ಮಂಜೂರಿಯಾಗದೆ ಇರುವುದು ಖೇದಕರ. ಗ್ರಾಮಸ್ಥರ ಅಭಿವೃದ್ಧಿ ಮತ್ತು ಸಂಪರ್ಕದ ದಿಶೆಯಲ್ಲಿ ಗಿಳಿಲಗುಂಡಿ ಸೇತುವೆ ನಿರ್ಮಾಣ ಅವಶ್ಯವೆಂದು ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ದೇವರಾಜ ಮರಾಠಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಶೀಘ್ರ ಕ್ರಮಕ್ಕೆ ಒತ್ತಾಯ:
ಜನಾಗ್ರಹದ ಒತ್ತಾಯ, ಜನಸಂಪರ್ಕಕ್ಕೆ ಹಾಗೂ ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಗಿಳಿಲಗುಂಡಿ ಭಾಗಕ್ಕೆ ಸಂಪರ್ಕ ಸೇತುವೆ ಮಂಜೂರಿ ಮಾಡುವಲ್ಲಿ ಸರಕಾರ ದಿಟ್ಟಕ್ರಮ ತೆಗೆದುಕೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಜನಪ್ರತಿನಿಧಿಗಳಿಗೆ ಒತ್ತಾಯಿಸಿದ್ದಾರೆ.