ದಾಂಡೇಲಿ: ಕನ್ನಡ ರಾಜ್ಯೋತ್ಸವದ ಭಾಗವಾಗಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನವೆಂಬರ ತಿಂಗಳಿಡೀ ಜಿಲ್ಲೆಯಾದ್ಯಂತ ಸಾಹಿತ್ಯದ ಕಾರ್ಯಕ್ರಮಗಳನ್ನು ಆಯೋಜಿಸುವ ‘ಕನ್ನಡ ಕಾರ್ತಿಕ: ಅನುದಿನ-ಅನುಸ್ಪಂದನ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸಾಹಿತ್ಯ ಪರಿಷತ್ತು ರಾಜ್ಯೋತ್ಸವದ ಸಮಯದಲ್ಲಿ ಇಂತಹದ್ದೊಂದು ತಿಂಗಳ ಸರಣಿ ಸಾಹಿತ್ಯದ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲೆಯ ಒಂದಿಲ್ಲೊಂದು ತಾಲೂಕುಗಳಲ್ಲಿ ತಿಂಗಳಿಡೀ ನಿತ್ಯ ಸಾಹಿತ್ಯದ ಕಾರ್ಯಕ್ರಮ ನಡೆಯುತ್ತಿರುತ್ತದೆ ಎಂದು ತಿಳಿಸಿದ್ದಾರೆ.
ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಕಾರ್ಯಕ್ರಮದ ಉದ್ಘಾಟನೆ ಹಾಗೂ ರಾಜ್ಯೋತ್ಸವ ಕವಿಗೋಷ್ಠಿ ಕಾರ್ಯಕ್ರಮ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ದಾಂಡೇಲಿಯ ಕರ್ನಾಟಕ ಸಂಘದ ಸಭಾಭವನದಲ್ಲಿ ಆರಂಭಗೊAಡು ಪ್ರತಿ ತಾಲ್ಲೂಕಿನಲ್ಲಿಯೂ ಒಂದಲ್ಲ ಒಂದು ರೀತಿಯ ಕನ್ನಡ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ನ.30ರಂದು ಮುಂಜಾನೆ 10.30ಕ್ಕೆ ಜಿಲ್ಲಾ ಕಸಾಪದಿಂದ ಕಾರವಾರದ ಬಾಡದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಕಾರ್ತಿಕದ ಸಮಾರೋಪ ಹಾಗೂ ಕನ್ನಡ- ಕನ್ನಡಿಗ- ಕರ್ನಾಟಕ ಒಂದು ಸೌಹಾರ್ದ ಸಂವಾದ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.