ಬೆಂಗಳೂರು: ನಟ ‘ಡಾಲಿ’ ಧನಂಜಯ ನಟನೆಯ ‘ಹೆಡ್ಬುಷ್’ ಸಿನಿಮಾ ವಿವಾದ ಸಂಧಾನದಲ್ಲಿ ಸುಖಾಂತ್ಯಗೊಂಡಿದೆ. ವಿವಾದಕ್ಕೆ ಕಾರಣವಾದ ಸಂಭಾಷಣೆಯನ್ನು ಚಿತ್ರದಿಂದ ತೆಗೆಯಲು(ಮ್ಯೂಟ್ ಮಾಡಲು) ಚಿತ್ರತಂಡ ಗುರುವಾರ ಒಪ್ಪಿದೆ.
ಸಿನಿಮಾದಲ್ಲಿ ‘ಜುಜುಬಿ ಕರಗ’ ಹಾಗೂ ಕರಗ ಹೊರುತ್ತಿದ್ದ ಅರ್ಚಕರಾದ ದಿವಂಗತ ಶಿವಶಂಕರ್ ಅವರನ್ನು ಏಕವಚನದಲ್ಲಿ ಉಲ್ಲೇಖಿಸಿರುವುದನ್ನು ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸತೀಶ್ ತೀವ್ರವಾಗಿ ಖಂಡಿಸಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬುಧವಾರ ದೂರು ನೀಡಿದ್ದರು. ಈ ಅಂಶಗಳನ್ನು ಸಿನಿಮಾದಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಗುರುವಾರ ಹೆಡ್ಬುಷ್ ಚಿತ್ರತಂಡ ಹಾಗೂ ಸಮಿತಿಯ ಸದಸ್ಯರ ಜೊತೆ ಸಂಧಾನ ಸಭೆಯನ್ನು ಮಂಡಳಿ ಆಯೋಜಿಸಿತ್ತು. ಈ ಸಭೆಯಲ್ಲಿ ಸಮಿತಿಯ ಆಗ್ರಹವನ್ನು ಚಿತ್ರತಂಡ ಒಪ್ಪಿದೆ. ‘ಸಿನಿಮಾದಲ್ಲಿ ಕರಗ ದೃಶ್ಯ ಬಂದಾಗ ಆ ಪದದ ಬಳಕೆ ಬೇಡ ಎಂದು ಅಗ್ನಿ ಶ್ರೀಧರ್ ಅವರು ಹೇಳಿದ್ದರು. ಆದರೆ ನಾನು ಹಾಗೂ ನಿರ್ದೇಶಕರು ಆ ಪದವಿದ್ದರೆ ಚೆನ್ನಾಗಿರುತ್ತದೆ ಎಂದುಕೊಂಡಿದ್ದೆವು. ತಪ್ಪಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಸಂಧಾನ ಸಭೆಯಲ್ಲಿ ಸಮುದಾಯದ ಹಿರಿಯರು ನಮಗೆ ಇನ್ನಷ್ಟು ಸೂಕ್ಷ್ಮವಾಗಿ ಸಿನಿಮಾ ಮಾಡಲು ಪ್ರೇರೇಪಿಸಿದರು. ಅವರ ಮಾತುಗಳು ನಮ್ಮ ಪ್ರಯತ್ನವನ್ನು ಟೀಕಿಸಲಿಲ್ಲ. ಸಮುದಾಯಕ್ಕೆ ನೋವುಂಟು ಮಾಡಿದ ಪದವನ್ನು ತೆಗೆಯುತ್ತೇವೆ. ನಾನು ಎಲ್ಲ ಕಲೆಯನ್ನೂ ಪ್ರೀತಿಸುತ್ತೇನೆ. ಯಾರ ಧಾರ್ಮಿಕ ಭಾವನೆಯನ್ನೂ ನೋಯಿಸುವುದಿಲ್ಲ. ವೀರಗಾಸೆ ದೃಶ್ಯಕ್ಕೂ ನಾನು ಸ್ಪಷ್ಟನೆ ನೀಡಿದ್ದೇನೆ. ಅವರೂ ಅರ್ಥಮಾಡಿಕೊಂಡಿದ್ದಾರೆ. ಕಲಾವಿದರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ’ ಎಂದು ಧನಂಜಯ ತಿಳಿಸಿದರು.
‘ನಾನು ಕೇವಲ ಸಿನಿಮಾ ಮಾಡಲು ಬಂದಿದ್ದೇನೆ. ಯಾವುದೇ ವಿವಾದ ನನಗೆ ಬೇಡ. ಒಳ್ಳೆಯ ಸಿನಿಮಾಗಳನ್ನು ಮಾಡಬೇಕು’ ಎಂದೂ ಧನಂಜಯ ಹೇಳಿದರು.
ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದು, ಇದರಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂಬ ವಿವಾದ ಈಗ ಶುರುವಾಗಿದೆ. ಹಿಂದೂ ಸಂಘಟನೆಗಳ ಕೆಲ ಕಾರ್ಯಕರ್ತರು ಈ ಕುರಿತಂತೆ ಪೊಲೀಸ್ ದೂರು ಕೂಡ ನೀಡಿದ್ದಾರೆ. ಇದರ ಮಧ್ಯೆ ಪತ್ರಿಕಾಗೋಷ್ಠಿ ನಡೆಸಿದ್ದ ಧನಂಜಯ್ ಚಿತ್ರದಲ್ಲಿ ವೀರಗಾಸೆಗೆ ಯಾವುದೇ ಅವಮಾನ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದರ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಧನಂಜಯ್ ವಿರುದ್ಧ ಟೀಕೆ ಮಾಡಿ ವಿಡಿಯೋ ಬಿಡುಗಡೆ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಹಲವರು ಧನಂಜಯ್ ಪರ ನಿಂತಿದ್ದಾರೆ. ಅಲ್ಲದೆ #westandwithdhanjaya ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಜೊತೆಗೆ ಧನಂಜಯ್ ಮಾತನಾಡಿರುವ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.
ಈ ಪೈಕಿ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಧನಂಜಯ್, ಬಡವರ ಮಕ್ಕಳು ಬೆಳೆಯಬೇಕು ಎಂದು ಹೇಳಿದ್ದು, ಅಲ್ಲದೆ ಚಿತ್ರದಲ್ಲೂ ಇದನ್ನು ಬಳಸಿಕೊಳ್ಳಲಾಗಿದೆ. ಈಗ ಇದೇ ವಿಡಿಯೋವನ್ನು ಧನಂಜಯ್ ಅವರಿಗೆ ಬೆಂಬಲಿಸುತ್ತಿರುವವರು ಹಂಚಿಕೊಳ್ಳುತ್ತಿದ್ದು, ಕನ್ನಡ ನಾಡು ನುಡಿ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಡಾಲಿ ಧನಂಜಯ್ ಅವರಿಗೆ ನಮ್ಮ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.