ಕಾರವಾರ: ಎಸ್ಬಿಐ ಯೋನೋ ಆ್ಯಪ್ ಬ್ಲಾಕ್ ಆಗಿದೆ ಎಂದು ಮೆಸೇಜ್ ಕಳುಹಿಸಿ, ನಂತರ ಬ್ಯಾಂಕ್ ಮಾಹಿತಿ ಪಡೆದು ಸುಮಾರು ಮೂರು ಲಕ್ಷಕ್ಕೂ ಅಧಿಕ ಹಣವನ್ನ ಆನ್ಲೈನ್ ಮೂಲಕ ಲಪಟಾಯಿಸಿರುವ ಕುರಿತು ಇಲ್ಲಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಕಾಜುಭಾಗ ನಿವಾಸಿ ವಿದ್ಯಾ ಕಾಮತ್ ವಂಚನೆಗೊಳಗಾದ ಮಹಿಳೆಯಾಗಿದ್ದಾರೆ. ಇವರ ಮೊಬೈಲ್ನಲ್ಲಿ ಇವರ ಚಿಕ್ಕಮ್ಮನ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದ್ದು, ಬುಧವಾರ ‘ಇಂದು ಎಸ್ಬಿಐ ಯೋನೋ ಆ್ಯಪ್ ಬ್ಲಾಕ್ ಆಗಲಿದೆ. ತಕ್ಷಣ ಪಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ’ ಎಂದು ಮೆಸೇಜ್ ಒಂದನ್ನ ಕಳುಹಿಸಲಾಗಿತ್ತು. ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ ಎಂದು ಮೆಸೇಜ್ ಓಪನ್ ಮಾಡಿದ ಅವರು, ಖಾತೆಯ ಮಾಹಿತಿಗಳನ್ನ ಓಟಿಪಿ ಸಮೇತ ಅಪ್ಲೋಡ್ ಮಾಡಿದ್ದಾರೆ.
ಅಪ್ಲೋಡ್ ಆದ ಮರುಕ್ಷಣವೇ 99,999ರಂತೆ ಮೂರು ಬಾರಿ ಹಾಗೂ 24,989 ಒಮ್ಮೆ ಸೇರಿ ಒಟ್ಟು 3,24,986 ರೂ. ಹಣವನ್ನ ಖಾತೆಯಿಂದ ವರ್ಗಾವಣೆ ಮಾಡಿಕೊಂಡಿದ್ದಾರೆ. ತಮಗೆ ವಂಚನೆಯಾಗಿರುವ ಬಗ್ಗೆ ತಿಳಿಯುತ್ತಿದ್ದಂತೆ ತಕ್ಷಣ ಬೆಂಗಳೂರು ಸೈಬರ್ ಸೆಂಟರ್ಗೆ ಮಾಹಿತಿ ನೀಡಿದ್ದು, ಬಳಿಕ ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.