ಸಿದ್ದಾಪುರ: ಅರಣ್ಯ ಹಕ್ಕು ಕಾಯ್ದೆ ಅರಣ್ಯ ವಾಸಿಗಳ ಪರವಾಗಿದೆ. ಆದರೆ ಹೊಸ ಅರಣ್ಯ ಅತಿಕ್ರಮಣಕ್ಕೆ ಅವಕಾಶವಿಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಥ ನಾಯ್ಕ ಹೇಳಿದರು.
ಅವರು ಇಂದು ಅರಣ್ಯ ಸಿಬ್ಬಂದಿಗಳಿಂದ ಅರಣ್ಯ ವಾಸಿಗಳಿಗೆ ಉಂಟಾದ ದೌರ್ಜನ್ಯ, ಕಿರುಕುಳ ಹಾಗೂ ಸಾಗುವಳಿ ಆತಂಕವಾಗಿರುವ ಪ್ರದೇಶಗಳಿಗೆ ಭೇಟಿಕೊಟ್ಟು ಹೋರಾಟಗಾರರ ಪದಾಧಿಕಾರಿಗಳೊಂದಿಗೆ ಮಾತನಾಡಿದರು.
ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಆರ್ಜಿ ಸಲ್ಲಿಸಿದ ನಂತರ ಅತಿಕ್ರಮಣದಾರರಿಗೆ ಆತಂಕ ಕಿರುಕುಳ ಹಾಗೂ ದೌರ್ಜನ್ಯ ಎಸಗಲು ಕಾನೂನಿನಲ್ಲಿ ಅವಕಾಶವಿಲ್ಲದಿದ್ದಾಗ್ಯೂ, ಪದೇ ಪದೇ ಅರಣ್ಯ ಸಿಬ್ಬಂದಿಗಳಿಂದ ಜಿಲ್ಲೆಯಲ್ಲಿ ಕಾನೂನು ಬಾಹೀರ ಕೃತ್ಯ ಜರುಗುತ್ತಿರುವುದು ವಿಷಾದಕರ. ಅರಣ್ಯ ಭೂಮಿ ಮಂಜೂರಿಯಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಹಿನ್ನೆಲೆಯಲ್ಲಿ ಮಂಜೂರು ಪ್ರಕ್ರಿಯೆಯಲ್ಲಿ ತೊಡಕು ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿಗಳು ಅರಣ್ಯವಾಸಿಗಳಿಗೆ ಕಿರುಕುಳ ನೀಡುವುದು ಸಮಂಜಸವಲ್ಲ ಎಂದು ಅವರು ಹೇಳಿದರು.
ಹೋರಾಟಗಾರರಾದ ವಿನಾಯಕ ನಾಯ್ಕ ಬಿ.ಡಿ.ನಾಯ್ಕ ಕುರ್ಗೆತೋಟ, ಕೆ.ಟಿ. ನಾಯ್ಕ ಕ್ಯಾದಗಿ, ಸುಬ್ಬು ಗೌಡ, ರಾಜು ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸಿದ ಶೇ 7ರಷ್ಟು ಅರ್ಜಿಗಳಿಗೆ ಜಿಪಿಎಸ್ ಆಗಿಲ್ಲ. ಶೇ 73ರಷ್ಟು ಅರ್ಜಿಗಳಿಗೆ ಆಗಿರುವ ಜಿಪಿಎಸ್ ಅಸಮರ್ಪಕವಾಗಿದೆ. ಹಾಗಾಗಿ ಜಿಪಿಎಸ್ ಮರು ಪರಿಶೀಲನೆಗೆ ಅತಿಕ್ರಮಣದಾರರು ಅರ್ಜಿ ಸಲ್ಲಿಸುವುದು ಅನಿವಾರ್ಯವಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಥ ನಾಯ್ಕ ಹೇಳಿದರು .