ಶಿರಸಿ: ತಾಲೂಕಿನ ಬಿಸಿಲಕೊಪ್ಪದಿಂದ ಹಾವೇರಿವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭದಲ್ಲಿಯೇ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಮೇಲ್ದರ್ಜೆಗೆ ಏರಿಸಿರುವ ರಸ್ತೆಯಲ್ಲಿ ಮೂರು ಸಿಡಿ ಕಾಮಗಾರಿಗಳು ಅರ್ಧಕ್ಕೆ ನಿಂತಿರುವುದರಿಂದ ಅಲ್ಲಿ ಹೊಂಡಗುಂಡಿಗಳಾಗಿ ವಾಹನ ಸಂಚಾರಕ್ಕೆ ಭಾರೀ ತೊಂದರೆಯಾಗುತ್ತಿದೆ. ಈ ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಹೋದರೆ ಮುಂದಿನ ಬಂಪರ್ ಗತಿ ಅಧೋಗತಿ ಎನ್ನುವಂತಿದೆ.
ಸಾಗರಮಾಲಾ ಯೋಜನೆಯಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಸ್ಟೇಜ್ 2 ರಸ್ತೆ ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಬಿಸಲಕೊಪ್ಪದಿಂದ ಆರಂಭವಾಗಿ ಸುಮಾರು ಎರಡು ತಿಂಗಳಾಗಿದೆ. ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭದಲ್ಲಿ ಹಾವೇರಿ ರಸ್ತೆಯಲ್ಲಿ ಮೂರು ಸಿಡಿಗಳನ್ನು ಮಾಡಲಾಗುತ್ತಿದ್ದು, ಮಳೆಯ ಕಾರಣಕ್ಕೆ ಸಿಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಿಂದಾಗಿ ಮೂರು ಸಿಡಿಗಳನ್ನು ಮಾಡುವಾಗ ಕೊರೆದ ರಸ್ತೆಯು ಮಳಗೆ ಹೊಂಡಗುಂಡಿಗಳಾಗಿ ತುಂಬಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಮಳೆ ನಿಂತಿರುವುದರಿಂದ ಧೂಳುಮಯವಾದ ಈ ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಹೋದರೆ ಕಾರಿನ ಬಂಪರ್ ಕಿತ್ತು ಕಾರಿಗೆ ಹಾನಿಯಾಗುತ್ತಿದೆ. ಈ ರಸ್ತೆಯಲ್ಲಿ ದಿನ ನಿತ್ಯ ನೂರಾರು ಕಾರುಗಳು ಸಂಚರಿಸುತ್ತದೆ. ಇದರಲ್ಲಿ ಬಹಳಷ್ಟು ಕಾರುಗಳ ಬಂಪರ್ ಕಿತ್ತು ರಸ್ತೆಗೆ ಬಿದ್ದಿದೆ.
ದ್ವಿಚಕ್ರ ವಾಹನ ಸವಾರರಂತೂ ಕೈಯಲ್ಲಿ ಜೀವ ಹಿಡಿದುಕೊಂಡೆ ಬೈಕ್ ಚಲಾಯಿಸುತ್ತ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಈ ರಸ್ತೆಯನ್ನು ಏಕೆ ಅಗಲಿಕರಣ ಮಾಡುತ್ತಿದ್ದಾರೆ, ಎಲ್ಲಿಯವರೆಗೆ ಮಾಡುತ್ತಿದ್ದಾರೆ, ಯಾರು ಮಾಡುತ್ತಿದ್ದಾರೆ, ಯಾವ ಯೋಜನೆಯಲ್ಲಿ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಸುತ್ತಲಿನ ಗ್ರಾಮದ ಜನರಿಗೆ ಗೊತ್ತೇ ಇಲ್ಲ! ಕಾರಣ ಕಾಮಗಾರಿ ನಡೆಯುವ ಸ್ಥಳದಲ್ಲಿ ಯಾವುದೇ ಫಲಕಗಳನ್ನ ಅಳವಡಿಸಿಲ್ಲ. ರಸ್ತೆ ಅಗಲೀಕರಣಕ್ಕಾಗಿ ಸಿಡಿ ಕಾಮಗಾರಿ ಮಾಡುತ್ತಿರುವುದು ಸರಿಯಾದರೂ ವಾಹನ ಸಂಚಾರಕ್ಕೆ ಅನುಕೂಲಕರವಾಗಿ ಮಾಡದೇ ಹಾಗೆಯೇ ಬಿಟ್ಟು ಹೋಗಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಅಲ್ಲಿ ದಿನನಿತ್ಯ ಸಂಚರಿಸುವ ಗ್ರಾಮಸ್ಥರಲ್ಲಿ ಮತ್ತು ವಾಹನದಾರರಲ್ಲಿ ಮೂಡುವಂತಾಗಿದೆ.
ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕಾಮಗಾರಿ ನಡೆಯುವ ಸ್ಥಳದಲ್ಲಿ ಕಾಮಗಾರಿಯ ನಾಮಫಲಕ ಅಳವಡಿಸಿ ಸ್ಥಗಿತಗೊಳಿಸಿರುವ ಕಾಮಗಾರಿಯನ್ನು ಕೂಡಲೇ ಆರಂಭ ಮಾಡುವುದರ ಜೊತೆಗೆ ವಾಹನ ಸಂಚಾರಕ್ಕೆ ಅನುಕೂಲವಾಗುವಷ್ಟಾದರೂ ರಸ್ತೆಯನ್ನು ದುರಸ್ತಿ ಪಡಿಸಿಕೊಡಬೇಕು. ಇಲ್ಲವಾದಲ್ಲಿ ಗ್ರಾಮಸ್ಥರಿಂದ ಮತ್ತು ವಾಹನದಾರರಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಸ್ತೆ ಕಾಮಗಾರಿ ನಿಂತು ಸುಮಾರು ಒಂದೂವರೆ ತಿಂಗಳಾಗಿದೆ. ಈ ರಸ್ತೆಯಲ್ಲಿ ಸಿಡಿ ಮಾಡುವುದಕ್ಕಾಗಿ ರಸ್ತೆಯನ್ನು ಕೊರೆದು ಸಿಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೆ. ಇದಕ್ಕೆ ಮಳೆ ಕಾರಣ ಇರಬಹುದು. ಆದರೆ ಸಾರ್ವಜನಿಕರು ಸಂಚರಿಸಲು ರಸ್ತೆಯೇ ಇಲ್ಲದಂತೆ ಮಾಡಿ ಹೋಗಿರುವುದು ಬೇಸರದ ಸಂಗತಿಯಾಗಿದೆ. ಕಾರು ಚಲಾಯಿಸಿಕೊಂಡು ಹೋದರೆ ಬಂಪರ್ ಕಿತ್ತು ಬರುತ್ತದೆ. ಇದಕ್ಕೆ ಯಾರು ಹೊಣೆ? ಎಂದು ಎಪಿಎಂಸಿ ಸದಸ್ಯ ಸುನಿಲ್ ನಾಯ್ಕ ಮಳಲಗಾಂವ್ ಪ್ರಶ್ನಿಸಿದ್ದಾರೆ.
ಕಾಮಗಾರಿ ನಡೆಯುತ್ತಿರುವ ಬಗ್ಗೆ ನಾಮಫಲಕ ಇಲ್ಲ. ಇದರಿಂದ ಜನರಲ್ಲಿ ಸಂಶಯ ವ್ಯಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರು ಕಾಮಗಾರಿ ಆರಂಭಿಸುವುದರ ಜೊತೆಗೆ ವಾಹನ ಸುಗಮವಾಗಿ ಸಂಚರಿಸುವಷ್ಟಾದರೂ ಹಾಳಾದ ರಸ್ತೆಯನ್ನು ದುರಸ್ತಿಪಡಿಸಿಕೊಡಬೇಕು. ಇಲ್ಲವಾದಲ್ಲಿ ಮುಂದೇನು ಮಾಡಬೇಕೆನ್ನುವುದು ನಮಗೆ ಗೊತ್ತಿದೆ. ಜನರು ಅನಾವಶ್ಯವಾಗಿ ತಮ್ಮ ವಾಹನಗಳನ್ನು ಈ ರಸ್ತೆಯಿಂದ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಷ್ಟರಮಟ್ಟಿಗೆ ಈ ರಸ್ತೆ ಹೊಂಡಗುಂಡಿಗಳಾಗಿ ತುಂಬಿ ಹೋಗಿದೆ. ಇದಕ್ಕೆ ಯಾರು ಜವಾಬ್ದಾರರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.