ಭಟ್ಕಳ: ಪಟ್ಟಣದ ಮಣ್ಕುಳಿಯ ರಘುನಾಥ ರಸ್ತೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಒಳಚರಂಡಿ ಮಲೀನ ನೀರು ಬಾವಿಗಳಿಗೆ ಹರಿದು, ಕುಡಿಯುವ ನೀರು ಸಂಪೂರ್ಣ ಮಲೀನಗೊಳ್ಳುತ್ತಿದೆ. ಆದರೆ ಈ ಬಗ್ಗೆ ಪುರಸಭೆಗೆ ದೂರು ನೀಡಿದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.
ಮಣ್ಕುಳಿಯ ನಾಗವೇಣಿ ನಾಯ್ಕ ಎನ್ನುವವರ ಮನೆ ಬಾವಿಗೆ ಕಳೆದ ಹಲವಾರು ವರ್ಷಗಳಿಂದ ಒಳಚರಂಡಿಯ ಮಲೀನ ನೀರು ಸೇರಿ ಕಲುಷಿತಗೊಂಡಿದೆ. ಈ ಬಾವಿಯ ನೀರಿನಿಂದ ದುರ್ವಾಸನೆ ಹರಡುತ್ತಿದೆ. ಸದ್ಯ ಬಾವಿ ನೀರು ಕಲುಷಿತಗೊಂಡಾಗಿನಿAದ ಪುರಸಭೆ ನೀರಿಗೆ ಅವಲಂಬಿತರಾಗಿದ್ದಾರೆ ಈ ಕುಟುಂಬ. ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದು, ಬಾವಿಯ ನೀರು ಮಲೀನಗೊಳ್ಳುತ್ತಿರುವುದರಿಂದ ಆರೋಗ್ಯ ಸಮಸ್ಯೆಯಾಗುತ್ತಿದ್ದೆ. ಆದಷ್ಟು ಬೇಗ ಇದರಿಂದ ಮುಕ್ತಿಕೊಡಬೇಕಿದೆ ಎಂದು ಆಗ್ರಹಿಸುತ್ತಾರೆ ಮನೆಯ ಮಾಲೀಕಿ ನಾಗವೇಣಿ.
ಇನ್ನೋರ್ವರಾದ ರೇಖಾ ನಾಯ್ಕ, ನಮ್ಮ ಮನೆಯ ಬಾವಿ ನೀರು ಕಲುಷಿತಗೊಂಡು ಸುಮಾರು ಐದಾರು ವರ್ಷಗಳೇ ಕಳೆದಿವೆ. ಈ ಬಗ್ಗೆ ಪುರಸಭೆಗೆ ಸಾಕಷ್ಟು ಬಾರಿ ದೂರು ಕೂಡ ನೀಡಿದ್ದೇವೆ. ಒಂದು ಬಾರಿ ಮನೆಗೆ ಬಂದು ಬಾವಿಯ ನೀರನ್ನು ಪರೀಕ್ಷೆಗೆಂದು ತೆಗೆದುಕೊಂಡು ಹೋದವರು ಮತ್ತೆ ಈ ಕಡೆ ಬಂದಿಲ್ಲ. ಸದ್ಯ ಪುರಸಭೆ ನೀರು ಬರುತ್ತಿದೆ. ಆದರೆ ದಿನವೂ ಈ ನೀರನ್ನು ನಂಬಿಕೊಂಡಿರಲು ಸಾಧ್ಯವಾಗುವುದಿಲ್ಲ. ಈ ಬಾವಿಯಿಂದ ಬರುವ ದುರ್ವಾಸನೆನಿಂದ ಮನೆಯಲ್ಲಿರುವ ಸಣ್ಣ ಸಣ್ಣ ಮಕ್ಕಳಿಗೆ ಹಾಗೂ ನಮಗೆ ಪದೇ ಪದೇ ನೆಗಡಿ ಹಾಗೂ ಜ್ವರ ಬರುತ್ತಿದೆ ಎಂದು ಅಳಲು ತೋಡಿಕೊಂಡರು. ಆದಷ್ಟು ಬೇಗ ಪುರಸಭೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಿಕೊಂಡುವಂತೆ ಮನವಿ ಮಾಡಿಕೊಂಡಿದ್ದಾರೆ.