ಹಳಿಯಾಳ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈ ನಡುವೆ ಹಳಿಯಾಳ ಕ್ಷೇತ್ರದಲ್ಲಿ ಮತ್ತೆ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಘೋಟ್ನೇಕರ್ ಮತ್ತೆ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿರುವುದು ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ.
ಜಿಲ್ಲೆಯ ರಾಜಕೀಯ ಮಟ್ಟಿಗೆ ಹಳಿಯಾಳ ಕ್ಷೇತ್ರ ಜಿದ್ದಾಜಿದ್ದಿನ ಕ್ಷೇತ್ರ ಎಂದೇ ಕರೆಯಲಾಗಿತ್ತು. ಮಾಜಿ ಸಚಿವ ಹಾಲಿ ಕ್ಷೇತ್ರದ ಶಾಸಕ ಆರ್.ವಿ. ದೇಶಪಾಂಡೆ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ನಡುವೆ ಕಳೆದ ಮೂರು ಚುನಾವಣೆಗಳಿಂದ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಲೇ ಇದೆ. ಯಾರ ಗೆದ್ದರು ಐದು ಸಾವಿರಗಳ ಮತಗಳ ಅಂತರದಿಂದ ಮಾತ್ರ ಗೆಲುವನ್ನ ಪಡೆಯುತ್ತಿದ್ದು ಕ್ಷೇತ್ರದಲ್ಲಿ ಇಬ್ಬರು ನಾಯಕರುಗಳು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದರು.
ಹಳಿಯಾಳ ಕ್ಷೇತ್ರದಲ್ಲಿ ಇಬ್ಬರ ನಡುವೆ ಇದ್ದ ಪೈಪೋಟಿ ಈ ಬಾರಿ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ್ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿದ್ದರಿಂದ ತ್ರಿಕೋನ ಪೈಪೋಟಿ ನಡೆಯಲಿದೆ ಎನ್ನಲಾಗಿತ್ತು. ತನ್ನ ರಾಜಕೀಯ ಗುರು ದೇಶಪಾಂಡೆ ವಿರುದ್ದವೇ ವರ್ಷದಿಂದ ಸೆಡ್ಡು ಹೊಡೆದಿದ್ದ ಘೋಟ್ನೇಕರ್ ಈ ಬಾರಿ ಚುನಾವಣೆಯಲ್ಲಿ ನಿಂತೇ ನಿಲ್ಲುತ್ತೇನೆ, ಕಾಂಗ್ರೆಸ್ ನಿಂದಲೇ ಟಿಕೇಟ್ ಕೊಡುವಂತೆ ಪೈಪೋಟಿಗೆ ಇಳಿದಿದ್ದರು.
ಘೋಟ್ನೇಕರ್ ಚುನಾವಣಾ ಅಖಾಡಕ್ಕೆ ಸಿದ್ದತೆ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ ನಲ್ಲಿಯೇ ಕ್ಷೇತ್ರದಲ್ಲಿ ಎರಡು ಬಣಗಳಾದಂತಾಗಿತ್ತು. ಇದರ ನಡುವೆ ಘೋಟ್ನೇಕರ್ ವಿರುದ್ದ ಕೆಲ ಆರೋಪಗಳು ಸಾಕಷ್ಟು ಸದ್ದು ಮಾಡಿತ್ತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅನುಧಾನ ದುರ್ಬಳಕೆ, ಪರಿಶಿಷ್ಟ ಜಾತಿ ನಿಂದನೆ ಪ್ರಕಟಣ ಘೋಟ್ನೇಕರ್ ರಾಜಕೀಯದ ಮೇಲೆ ಪೆಟ್ಟು ಬೀಳುವಂತೆ ಮಾಡಿದ್ದು ಅನಾರೋಗ್ಯಕ್ಕೆ ಒಳಗಾಗಿ ಘೋಟ್ನೇಕರ್ ಸಹ ರಾಜಕೀಯ ಚಟುವಟಿಕೆಯಲ್ಲಿ ಗುರುತಿಸಿಕೊಳ್ಳುವುದನ್ನ ನಿಲ್ಲಿಸಿದ್ದರು.
ಕಳೆದ ಒಂದು ವಾರದಿಂದ ಮತ್ತೆ ಘೋಟ್ನೇಕರ್ ಕ್ಷೇತ್ರದ ರಾಜಕೀಯದಲ್ಲಿ ಎಂಟ್ರಿಯಾಗಿದ್ದಾರೆ. ಹಳಿಯಾಳ, ದಾಂಡೇಲಿ, ಜೋಯಿಡಾ ತಾಲೂಕಿನಲ್ಲಿ ವಿವಿಧ ಕಾರ್ಯಗಳಲ್ಲಿ ಓಡಾಟ ಪ್ರಾರಂಭಿಸಿದ್ದಾರೆ. ಜೋಯಿಡಾದಲ್ಲಿ ನಡೆದ ಕುಣಬಿಗಳ ಹೋರಾಟದಲ್ಲಿ ಸಹ ಪಾಲ್ಗೊಂಡಿದ್ದು ಇದು ಚುನಾವಣೆಗೆ ಘೋಟ್ನೇಕರ್ ಸಿದ್ದತೆಯನ್ನ ಮಾಡಿಕೊಂಡಿರುವ ಮುನ್ಸೂಚನೆ ಎನ್ನುವ ಮಾತು ಕೇಳಿ ಬಂದಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಘೋಟ್ನೇಕರ್ ಇದ್ದು, ಅಲ್ಲಿಯೇ ಟಿಕೇಟ್ ಕೊಡಿ ಎಂದು ಕೇಳಲು ಘೋಟ್ನೇಕರ್ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಹಿರಿಯ ರಾಜಕಾರಣಿ ಆರ್ ವಿ ದೇಶಪಾಂಡೆಗೆ ಟಿಕೇಟ್ ತಪ್ಪಿಸುವುದು ಸುಲಭದ ಮಾತಲ್ಲ. ಪಕ್ಷದ ಹಿರಿಯ ನಾಯಕರು ಈಗಾಗಲೇ ದೇಶಪಾಂಡೆಗೆ ಕ್ಷೇತ್ರದಲ್ಲಿ ತಯಾರಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದು ಘೋಟ್ನೇಕರ್ಗೆ ಟಿಕೇಟ್ ಸಿಗುವುದು ಕಷ್ಟಕರ ಎನ್ನಲಾಗಿದೆ. ಸದ್ಯ ಘೋಟ್ನೇಕರ್ ಮತ್ತೆ ರಾಜಕೀಯ ಎಂಟ್ರಿಯಾಗಿದ್ದು ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಬಹುತೇಕ ಆಗಲಿದೆ ಎನ್ನಲಾಗಿದ್ದು ಮತದಾರರ ಮನ ಗೆಲ್ಲಲು ಯಾರು ಯಶಸ್ವಿಯಾಗಲಿದ್ದಾರೆ ಎನ್ನುವುದನ್ನ ಕಾದು ನೋಡಬೇಕಾಗಿದೆ.
ವಿವಿಧ ಆಯಾಮದಲ್ಲಿ ಚಿಂತನೆ
ಮತ್ತೆ ರಾಜಕೀಯ ಅಂಗಣದಲ್ಲಿ ಕ್ಷೇತ್ರದಲ್ಲಿ ಕಾಲಿಟ್ಟಿರುವ ಘೋಟ್ನೇಕರ್ ತನ್ನ ನೆಲೆ ಭದ್ರ ಪಡಿಸಿಕೊಳ್ಳಲು ವಿವಿಧ ಆಯಾಮದಲ್ಲಿ ಚಿಂತನೆಯನ್ನ ಸಹ ನಡೆಸಿದ್ದಾರೆ ಎನ್ನಲಾಗಿದೆ. ತನ್ನ ರಾಜಕೀಯ ಗೆಳೆಯ ಶಿವರಾಮ್ ಹೆಬ್ಬಾರ್ ಮೂಲಕ ಬಿಜೆಪಿ ಎಂಟ್ರಿಯಾಗಿ ಟಿಕೇಟ್ ಪಡೆಯುವ ಚಿಂತನೆಯನ್ನ ಸಹ ಘೋಟ್ನೇಕರ್ ಮಾಡಿದ್ದು, ಇನ್ನೊಂದೆಡೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸಹ ಘಟ್ಟಿಯಾಗಿರುವುದರಿಂದ ಕಾಂಗ್ರೆಸ್ ನಲ್ಲಿಯೇ ನಾಯಕರ ಮನವೊಲಿಸಿ ಟಿಕೇಟ್ ಪಡೆಯುವ ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಕಾಂಗ್ರೆಸ್ ಟಿಕೇಟ್ ಸಿಗದಿದ್ದರೆ ಪಕ್ಷೇತರವಾಗಿ ಕಣಕ್ಕೆ ಇಳಿಯುವ ಚಿಂತನೆ ಮತ್ತೊಂದೆಡೆ ಮಾಡಿದ್ದರೆ, ಜೆಡಿಎಸ್ ನಾಯಕರುಗಳು ಘೋಟ್ನೇಕರ್ ಅವರನ್ನ ಸಂಪರ್ಕಸಿದ್ದು ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಯವರ ಅಭಿಮಾನಿಗಳು ಇಂದಿಗೂ ಇದ್ದು ಘೋಟ್ನೇಕರ್ ಅವರ ಮರಾಠ ಮತ ಜೊತೆಗೆ ಕುಮಾರಸ್ವಾಮಿ ಅಭಿಮಾನಿಗಳು ಸೇರಿದರೆ ಚುನಾವಣೆಯಲ್ಲಿ ಗೆಲ್ಲುವು ಸುಲಭವಾಗಲಿದೆ ಎನ್ನುವ ಚಿಂತನೆಯನ್ನ ಮಾಡಿದ್ದಾರೆ ಎನ್ನಲಾಗಿದೆ.