ಕಾರವಾರ: ತಾಲೂಕಿನ ಶಿರವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೌಕಾದಳದಿಂದ ಬರುವ ತ್ಯಾಜ್ಯವನ್ನು ಖಾಸಗಿ ಜಾಗದಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಕಳೆದ ಮೂರು ವರ್ಷಗಳ ಹಿಂದೆ ನೌಕಾದಳದಲ್ಲಿನ ತ್ಯಾಜ್ಯವನ್ನ ಶಿರವಾಡ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲು ಅನುಮತಿಯನ್ನು ನಗರಸಭೆ ಬಳಿ ಕೇಳಿದ್ದರು ಎನ್ನಲಾಗಿದೆ. ಆದರೆ ಆಗ ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಅವಕಾಶವನ್ನು ನೀಡಿರಲಿಲ್ಲ.
ಆದರೆ ಕೆಲ ವರ್ಷಗಳಿಂದ ಪ್ರತಿ ವಾರಕ್ಕೊಮ್ಮೆ ಒಂದು ಲೋಡ್ ತ್ಯಾಜ್ಯವನ್ನು ನೌಕಾದಳದಿಂದ ವಾಹನದಲ್ಲಿ ತಂದು ಖಾಸಗಿ ಜಾಗದಲ್ಲಿ ಹಾಕಲಾಗುತ್ತಿದೆ ಎನ್ನಲಾಗಿದೆ. ಇನ್ನು ತಂದ0ತಹ ತ್ಯಾಜ್ಯವನ್ನ ವಿಂಗಡಣೆ ಮಾಡಿ ಹಸಿ ಕಸವನ್ನ ಜಾಗದ ಹಿಂಬದಿಯಲ್ಲಿರುವ ಹಳಕ್ಕೆ ಎಸೆದರೆ, ಇನ್ನಿತ ಪ್ಲಾಸ್ಟಿಕ್, ಈ ತ್ಯಾಜ್ಯಗಳನ್ನ ಬೇರೆ ಕಡೆ ವಿಲೇವಾರಿ ಮಾಡಲಾಗುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ನಲ್ಲಿ ಸಹ ಸದಸ್ಯರೊಬ್ಬರು ಧ್ವನಿ ಎತ್ತಿದ್ದರು ಎನ್ನಲಾಗಿದೆ. ಶಿರವಾಡ ಪಂಚಾಯತ್ ವ್ಯಾಪ್ತಿಯ ಹಾಗೂ ಕಾರವಾರ ನಗರಸಭೆ ವ್ಯಾಪ್ತಿಯ ಇಬ್ಬರು ಪ್ರಭಾವಿ ವ್ಯಕ್ತಿಗಳು ನೌಕಾದಳದಿಂದ ಬರುವ ತ್ಯಾಜ್ಯವನ್ನ ವಿಲೇವಾರಿ ಮಾಡುವ ಜವಬ್ದಾರಿಯನ್ನ ತೆಗೆದುಕೊಂಡಿದ್ದಾರೆ ಎನ್ನುವ ಆರೋಪವಿದ್ದು, ತ್ಯಾಜ್ಯ ವಿಲೇವಾರಿ ಮಾಡುವ ಖಾಸಗಿ ಜಾಗದ ಮಾಲಿಕರು ಯಾರು ಎನ್ನುವುದು ಕೆಲವರಿಗೆ ತಿಳಿಯದಂತಾಗಿದೆ.
ಇನ್ನು ಇದೇ ವಿಚಾರ ಶಿರವಾಡ ಭಾಗದಲ್ಲಿ ರಾಜಕೀಯ ಚರ್ಚೆಗಳಿಗೆ ಸಹ ಕಾರಣವಾಗಿದೆ ಎನ್ನಲಾಗಿದ್ದು, ಒಂದೊಮ್ಮೆ ಅಕ್ರಮವಾಗಿ ಕಸವನ್ನ ತಂದು ಖಾಸಗಿ ಜಾಗದಲ್ಲಿ ವಿಲೇವಾರಿ ಮಾಡುತ್ತಿದ್ದರೆ ಸ್ಥಳೀಯ ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.