ಕಾರವಾರ: ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆಯನ್ನ ಯಾರು ಪರವಾನಿಗೆ ಇಲ್ಲದೇ ತೆಗೆಯಲಾಗುತ್ತಿದೆ. ಆದರೆ ಕೆಲವರನ್ನ ಮಾತ್ರ ಗುರಿಯಾಗಿಸಿ ಅಧಿಕಾರಿಗಳು ತೊಂದರೆ ನೀಡುತ್ತಿದ್ದು, ಅನಧಿಕೃತವಾಗಿ ಕೆಂಪು ಕಲ್ಲು ಗಣಿಗಾರಿಕೆ ಮಾಡುವ ಎಲ್ಲರ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಚಂದ್ರಪ್ಪ ಚನ್ನಯ್ಯ ಆಗ್ರಹಿಸಿದ್ದಾರೆ.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕಿನಲ್ಲೂ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಶಿರಸಿ ತಾಲೂಕಿನ ಬನವಾಸಿ ಭಾಗದಲ್ಲಿ ಹಲವರು ಕೆಂಪು ಕಲ್ಲು ಗಣಿಗಾರಿಕೆಯನ್ನ ಮಾಡುತ್ತಿದ್ದು, ಆದರೆ ನನಗೊಬ್ಬನಿಗೆ ಮಾತ್ರ ವಿನಾಕಾರಣ ತಾಲೂಕು ದಂಡಾಧಿಕಾರಿಗಳು ದಂಡ ವಿಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನದು ಶಿರಸಿ ತಾಲೂಕಿನ ಮುಂಡಿಗೇಹಳ್ಳಿಯಲ್ಲಿ ಮಾಲ್ಕಿ ಜಮೀನು ಇದ್ದು, ಜಮೀನನ್ನ ಖರೀದಿ ಮಾಡುವ ಮುನ್ನವೇ ಸುಮಾರು ಮೂರು ಎಕರೆ ಜಾಗದಲ್ಲಿ ಕೆಂಪು ಕಲ್ಲನ್ನ ತೆಗೆದಿದ್ದರು. ಆ ಜಾಗದಲ್ಲಿ ಕೃಷಿ ಚಟುವಟಿಕೆಯನ್ನ ಮಾಡುತ್ತಿದ್ದು, ಉಳಿದ ಜಾಗದಲ್ಲಿ ಭೂಮಿ ಸಮತಟ್ಟಾಗಿ ಮಾಡಿಕೊಳ್ಳಲು ಕೆಂಪು ಕಲ್ಲನ್ನ ತೆಗೆದಿದ್ದೆನು. ಆದರೆ ಕಳೆದ ತಿಂಗಳು ತಾಲೂಕು ದಂಡಾಧಿಕಾರಿಗಳು, ಅರಣ್ಯ ಇಲಾಖೆ ಹಾಗೂ ಪೊಲೀಸರು ಜಮೀನಿಗೆ ಬಂದು ಟ್ರಾಕ್ಟರ್, ಲಾರಿಯನ್ನ ಸೀಜ್ ಮಾಡಿದ್ದರು. ನಂತರ ನಾನು 25 ಸಾವಿರ ದಂಡ ತುಂಬಿ ವಾಹನ ಬಿಡಿಸಿಕೊಂಡಿದ್ದೆ. ಇದೇ ಸಂದರ್ಭದಲ್ಲಿ ತಾನು ಮಾಲ್ಕಿ ಜಮೀನಿನಲ್ಲಿ ಕೆಂಪು ಕಲ್ಲನ್ನ ತೆಗೆದಿದ್ದು, ಕೆಲವರು ಅರಣ್ಯ ಜಮೀನಿನಲ್ಲಿ ಕೆಂಪು ಕಲ್ಲನ್ನ ತೆಗೆದಿದ್ದಾರೆ. ಅಂತವರ ಮೇಲೆ ಕ್ರಮ ಕೈಗೊಳ್ಳಿ ಎಂದು ಜಾಗವನ್ನ ತೋರಿಸಿ ಅನಧಿಕೃತವಾಗಿ ಮಾಡುವವರ ಹೆಸರನ್ನ, ನೀಡಿದರು ತಾಲೂಕು ದಂಡಾಧಿಕಾರಿಗಳು ಕ್ರಮ ಕೈಗೊಂಡಿಲ್ಲ. ತಾನು ಕೆಂಪು ಕಲ್ಲು ತೆಗೆದಿದ್ದು ತಪ್ಪೇ, ಆದರೆ ಉಳಿದವರ ಮೇಲೆ ಸಹ ಯಾಕೆ ಕ್ರಮ ಕೈಗೊಂಡಿಲ್ಲ? ಅಧಿಕಾರಿಗಳು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ವರ್ತನೆ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಶಿರಸಿ ತಾಲೂಕಿನಲ್ಲಿ ದಿನವೊಂದಕ್ಕೆ ನೂರಾರು ವಾಹನದಲ್ಲಿ ಕೆಂಪು ಕಲ್ಲನ್ನ ಸಾಗಿಸಲಾಗುತ್ತದೆ. ಅಲ್ಲದೇ ಶಿವಮೊಗ್ಗ ಜಿಲ್ಲೆಯಿಂದಲೂ ಕೆಂಪು ಕಲ್ಲನ್ನ ತೆಗೆದುಕೊಂಡು ಅನಧಿಕೃತವಾಗಿ ಜಿಲ್ಲೆಗೆ ಬರಲಾಗುತ್ತಿದೆ. ಆದರೆ ಯಾರ ಮೇಲೆ ಕ್ರಮ ಕೈಗೊಳ್ಳದೇ ತಾನೊಬ್ಬ ದಲಿತ ಎನ್ನುವ ಕಾರಣಕ್ಕಾಗಿ, ನನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಜಿಲ್ಲೆಯಲ್ಲಿ ಎಲ್ಲರಿಗೂ ಅಧಿಕೃತವಾಗಿ ಕೆಂಪು ಕಲ್ಲು ಗಣಿಗಾರಿಕೆ ಮಾಡಲು ಅವಕಾಶ ಮಾಡಿಕೊಡಲು ಕ್ರಮ ಕೈಗೊಳ್ಳಲಿ, ಇಲ್ಲದಿದ್ದರೆ ಅನಧಿಕೃತ ಎಲ್ಲಾ ಕೆಂಪು ಕಲ್ಲು ಗಣಿಗಾರಿಕೆಯನ್ನೂ ಬಂದ್ ಮಾಡಲಿ ಎಂದು ಆಗ್ರಹಿಸಿದ್ದಾರೆ.